ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ 9 ಕೆಜಿ ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬಂಧಿತ ಆರೋಪಿಯನ್ನು ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಎಂದು ಗುರುತಿಸಲಾಗಿದೆ. ಮುಂಡಗೋಡಿನ ವಸಂತ್ ಕೊರವರ್ ಎಂಬಾತ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದು, ಆತ ಪರಾರಿಯಾಗಿದ್ದಾನೆ.

ಅರಣ್ಯ ಇಲಾಖೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಅವರ ನಿವಾಸದ ಮೇಲೆ ಮುಂಡಗೋಡ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 9 ಕೆಜಿ ತೂಕದ ಜಿಂಕೆ ಮಾಂಸ ಪತ್ತೆಯಾಗಿ ಜಪ್ತಿ ಮಾಡಲಾಯಿತು.

ದಾಳಿ ವೇಳೆ ರಮೇಶ್ ಚವ್ವಾಣ್ ಅವರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ (DyRFO) ಕು. ಸುನೀತಾ ಬಿ.ಎಂ., ಮುತ್ತಣ್ಣ ಹುಂದ್ರಾಳ, ಬೀಟ್ ಫಾರೆಸ್ಟರ್‌ಗಳಾದ ಅಮಿತ್ ಸಣ್ಣಕ್ಕಿ, ಹೇಮಾ ಕೂಸನೂರ್, ಮುಸ್ತಾಕ್ ಅಲಿ ಒಂಟಿ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಎರಡನೇ ಆರೋಪಿ ವಸಂತ್ ಕೊರವರ್ ಪತ್ತೆಗಾಗಿ ತನಿಖೆ ಹಾಗೂ ಶೋಧ ಕಾರ್ಯ ಮುಂದುವರಿದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

 

 

 

Please Share: