ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ: ಪ್ರವಾಸದ ಸಂಭ್ರಮಕ್ಕಾಗಿ ದಾಂಡೇಲಿಗೆ ತೆರಳಿದ್ದ ವಿಜಯಪುರದ ಯುವಕನಿಗೆ ಜಿಪ್‌ಲೈನ್ ಸಾಹಸ ಕ್ರೀಡೆ ದುರಂತವಾಗಿ ಪರಿಣಮಿಸಿದ್ದು, 30ರಿಂದ 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರ ನಗರದ ನಿವಾಸಿ ಕುಬೇರ್ ಸುರಪುರ ಅವರು ಕಳೆದ ಜುಲೈ 3ರಂದು ತಮ್ಮ ಸಹೋದರ ಪ್ರಶಾಂತ ಸುರಪುರ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ಗೆ ತೆರಳಿದ್ದರು. ಈ ವೇಳೆ ಜಿಪ್‌ಲೈನ್ ಚಟುವಟಿಕೆಯಲ್ಲಿ ಭಾಗವಹಿಸಿದ್ದಾಗ ಲಾಕ್ ಕಟ್ ಆಗಿ ಅವರು ಸುಮಾರು 30–40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯ ಭೀಕರ ದೃಶ್ಯಗಳು ಸಹೋದರ ಪ್ರಶಾಂತ ಅವರ ಮೊಬೈಲ್‌ನಲ್ಲಿ ಸೆರೆಯಾಗಿವೆ.

ಅಪಘಾತದಲ್ಲಿ ಕುಬೇರ್ ಅವರಿಗೆ ಎರಡೂ ಕೈ ಹಾಗೂ ಎರಡೂ ಕಾಲಿನ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಗಾಯಾಳುವನ್ನು ಮೊದಲಿಗೆ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ವಿಜಯಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನೂ ಕೈ ಮತ್ತು ಕಾಲುಗಳಿಗೆ ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುವುದಾಗಿ ತಿಳಿದುಬಂದಿದೆ.

ಈ ಅವಘಡಕ್ಕೆ ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಪಘಾತದ ಬಳಿಕ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ರೆಸಾರ್ಟ್ ಆಡಳಿತ ಭರವಸೆ ನೀಡಿದ್ದರೂ, ನಂತರ ಚಿಕಿತ್ಸಾ ವೆಚ್ಚಕ್ಕೆ ಸ್ಪಂದಿಸಿಲ್ಲ ಎಂದು ಕುಟುಂಬದವರು ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರೆಸಾರ್ಟ್ ಮ್ಯಾನೇಜರ್, ಅಪಘಾತ ಸಂಭವಿಸಿರುವುದನ್ನು ಒಪ್ಪಿಕೊಂಡಿದ್ದು, ಇದು ನಿರ್ಲಕ್ಷ್ಯದಿಂದ ನಡೆದದ್ದಲ್ಲ, ಆಕಸ್ಮಿಕ ಘಟನೆ ಎಂದು ತಿಳಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ವಿಜಯಪುರಕ್ಕೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ.

ಸಾಹಸ ಪ್ರವಾಸದ ಉತ್ಸಾಹದಲ್ಲಿ ತೆರಳಿದ್ದ ಯುವಕ ಇದೀಗ ಗಂಭೀರ ಗಾಯಗಳಿಂದ ಹಾಸಿಗೆ ಹಿಡಿದಿರುವ ಘಟನೆ ಸಾಹಸ ಕ್ರೀಡೆಗಳ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Please Share: