ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎರಡು ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೈಗಾ ಎನ್‌ಪಿಸಿಐಎಲ್ (NPCIL) ಸಿಎಸ್‌ಆರ್ ಯೋಜನೆಯಡಿ ಅನುಮೋದನೆ ದೊರೆತಿದ್ದು, ಇದಕ್ಕೆ ತಮ್ಮ ನಿರಂತರ ಹೋರಾಟ ಮತ್ತು ಮನವಿಗಳು ಫಲ ನೀಡಿವೆ ಎಂದು ಬಿಜೆಪಿ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಜಿ. ನಾಯ್ಕ (ಮಲ್ಲಾಪುರ) ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು, ಹರ್ಟುಗಾ ಕ್ರಾಸ್‌ನಿಂದ ಯಲ್ಲಾಪುರ ತಾಲೂಕಿನ ಬಾರೆವರೆಗೆ ಸುಮಾರು 14 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿಗೆ ಕೇಂದ್ರ ಅರಣ್ಯ ಸಚಿವಾಲಯದಿಂದ ಅನುಮತಿ ದೊರೆತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಈ ಕಾಮಗಾರಿಗೆ ಅನುಮೋದನೆ ದೊರೆಯಲು ಮುಖ್ಯಮಂತ್ರಿ, ಅರಣ್ಯ ಸಚಿವರು, ಲೋಕಸಭಾ ಸದಸ್ಯರು, ಕಾರವಾರ-ಅಂಕೋಲಾ ಹಾಗೂ ಯಲ್ಲಾಪುರ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸುವುದರ ಜೊತೆಗೆ ಮಾಧ್ಯಮಗಳ ಮೂಲಕವೂ ನಿರಂತರವಾಗಿ ವಿಷಯ ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ರಸ್ತೆ ಅಭಿವೃದ್ಧಿಯಿಂದ ಸಾರ್ವಜನಿಕರು, ಎನ್‌ಪಿಸಿಐಎಲ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ತುರ್ತು ವೈದ್ಯಕೀಯ ಸೇವೆ ಪಡೆಯುವವರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಹುಬ್ಬಳ್ಳಿ ಹಾಗೂ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕವೂ ಸುಗಮವಾಗಲಿದೆ. ಕಾಮಗಾರಿಯನ್ನು 2026ರ ನವೆಂಬರ್‌ನಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಕೆರವಡಿಯಿಂದ ಕೈಗಾ ಕ್ರಾಸ್‌ವರೆಗೆ ಸುಮಾರು 12 ಕಿ.ಮೀ. ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಸೇರಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಬಿಜೆಪಿ ವತಿಯಿಂದ ರಸ್ತೆ ಮೇಲೆಯೇ ಸಸಿ ನೆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಇದರ ಫಲವಾಗಿ ಲೋಕೋಪಯೋಗಿ ಇಲಾಖೆ (PWD) ಎನ್‌ಪಿಸಿಐಎಲ್‌ಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಿದೆ ಎಂದು ಕೃಷ್ಣಾ ನಾಯ್ಕ ತಿಳಿಸಿದ್ದಾರೆ.
ಪ್ರಸ್ತುತ ಎನ್‌ಪಿಸಿಐಎಲ್ ರಸ್ತೆ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕಾರ್ಯ ಆರಂಭಿಸಿದ್ದು, ಮಳೆಗಾಲದ ನಂತರ ರಸ್ತೆ ಸಂಪೂರ್ಣ ನವೀಕರಣ ಹಾಗೂ 7 ಮೀಟರ್ ಅಗಲೀಕರಣ ಕಾಮಗಾರಿ ಆರಂಭವಾಗಲಿದೆ. ಯಾವುದೇ ಅಡೆತಡೆಗಳು ಎದುರಾದರೆ ಸಂಬಂಧಿತ ಇಲಾಖೆಗಳು ತ್ವರಿತವಾಗಿ ಪರಿಹರಿಸಿ ಕಾಮಗಾರಿ ಶೀಘ್ರ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಾ ನಾಯ್ಕ ಮನವಿ ಮಾಡಿದ್ದಾರೆ.
