ಕರಾವಳಿ ವಾಯ್ಸ್ ನ್ಯೂಸ್

ಸಿದ್ದಾಪುರ, ಏ.8: ನ್ಯಾಯಾಲಯಕ್ಕೆ ಹಾಜರಾಗದೇ ಮೂರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸಿದ ಬಳಿಕ, ಆರೋಪಿಗೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾ ಸಂಖ್ಯೆ 85/2023 ಪ್ರಕರಣದ ಎರಡನೇ ಆರೋಪಿಯಾಗಿರುವ ಜಿಯಾವುಲ್ಲಾ (ತಂದೆ: ಬಾಷಾಸಾಬ್), ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳ್ಳೂರಕೇರಿ ನಿವಾಸಿಯಾಗಿದ್ದು, ಈತನ ಮೇಲೆ ನ್ಯಾಯಾಲಯದ ಆವರಣದಿಂದ ಪರಾರಿಯಾದ ಆರೋಪದ ಹಿನ್ನೆಲೆಯಲ್ಲಿ ಗುನ್ನಾ ಸಂಖ್ಯೆ 86/2023ರಲ್ಲಿ ಐಪಿಸಿ ಕಲಂ 224ರಡಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಸಿ.ಸಿ. ಸಂಖ್ಯೆ 805/2023ರಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಜಿಯಾ ಅಲಿಯಾಸ್ ಜಿಯಾವುಲ್ಲಾ ಕಳೆದ ಮೂರು ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಪೊಲೀಸರ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಏಪ್ರಿಲ್ 6ರಂದು ಭಟ್ಕಳದಲ್ಲಿ ಆರೋಪಿಯನ್ನು ಬಂಧಿಸಿ, ಸಿದ್ದಾಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಯಾವುಲ್ಲಾಗೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಶಾಂತಿನಾಥ ಪಾಸಾನೆ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಚೇತನಕುಮಾರ, ಅನಿಲ್ ನಾಯ್ಕ, ಪ್ರಸನ್ನ ನಾಯ್ಕ, ಭರತಕುಮಾರ, ಶಶಿಕಾಂತ ಹಾಗೂ ನ್ಯಾಯಾಲಯ ಸಿಬ್ಬಂದಿ ಮೋಹನ ಲಮಾಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮೇಲಾಧಿಕಾರಿಗಳು ಅಭಿನಂದಿಸಿದ್ದಾರೆ.

 

Please Share: