ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ: ಶರಾವತಿ ಕಣಿವೆಯ ಸಿಂಗಳಿಕ ಅಭಯಾರಣ್ಯದಲ್ಲಿರುವ ಕನ್ನಿಕಾ ಜಲಪಾತ ಪ್ರದೇಶದಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಸಾಹಸ ಪ್ರದರ್ಶಿಸಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದಡಿ ‘ಲೋಕಲ್ ಮ್ಯಾಪ್ಸ್’ ತಂಡದ ಐವರು ಅಪರಿಚಿತರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad

ಗೇರುಸೊಪ್ಪ ವಲಯದ ಉಪ ಅರಣ್ಯಾಧಿಕಾರಿಯವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜುಲೈ 23ರಂದು ಐವರು ಅಭಯಾರಣ್ಯದ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅಪಾಯಕಾರಿ ಸಾಹಸ ಕೃತ್ಯಗಳನ್ನು ನಡೆಸುತ್ತಾ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ, ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸುವ ಹಾಗೂ ಜೀವಕ್ಕೆ ಅಪಾಯ ಉಂಟುಮಾಡುವಂತಹ ಕೃತ್ಯವಾಗಿದೆ ಎಂದು ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಹೊನ್ನಾವರ ಪೊಲೀಸರು, ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ‘ಲೋಕಲ್ ಮ್ಯಾಪ್ಸ್’ ಫೇಸ್‌ಬುಕ್ ಖಾತೆಯ ಮಾಹಿತಿ ಸಂಗ್ರಹಿಸಿ, ವಿಡಿಯೋದಲ್ಲಿರುವ ವ್ಯಕ್ತಿಗಳ ಗುರುತು ಪತ್ತೆ ಮಾಡಲು ತನಿಖೆ ಆರಂಭಿಸಿದ್ದಾರೆ.

ಅರಣ್ಯ ಪ್ರದೇಶಗಳಿಗೆ ಅನುಮತಿಯಿಲ್ಲದೆ ಪ್ರವೇಶಿಸುವುದು, ಅಪಾಯಕಾರಿ ಸಾಹಸ ಪ್ರದರ್ಶನ ನಡೆಸುವುದು ಹಾಗೂ ಇಂತಹ ವಿಡಿಯೋಗಳನ್ನು ಚಿತ್ರೀಕರಿಸುವುದು ಕಾನೂನುಬಾಹಿರ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

 

 

Please Share: