ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಗ್ರ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಇನ್ನು ಮುಂದೆ ಕಾರವಾರದಲ್ಲೇ ಪಡೆಯಬಹುದಾಗಿದೆ. ನೇತ್ರ ಚಿಕಿತ್ಸಾ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಮೂಹವು ತನ್ನ ನೂತನ ಕೇಂದ್ರವನ್ನು ನವೆಂಬರ್ 6ರಂದು ಕಾರವಾರದಲ್ಲಿ ಆರಂಭಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆಯನ್ನು ಸ್ಥಳೀಯವಾಗಿಯೇ ಒದಗಿಸುವ ಮಹತ್ವದ ಹೆಜ್ಜೆಯಿಟ್ಟಿದೆ.
ನಗರದ ಡಾ. ಪಿಕಳೆ ರಸ್ತೆಯಲ್ಲಿರುವ ಹಳೆಯ ಕೊಂಕಣ ಮೆಡಿಕಲ್ ಸೆಂಟರ್ ಕಟ್ಟಡದಲ್ಲಿ ಮಧ್ಯಾಹ್ನ 12.05ಕ್ಕೆ ನೂತನ ಆಸ್ಪತ್ರೆ ಶುಭಾರಂಭಗೊಳ್ಳಲಿದೆ. ಉಡುಪಿಯ ಸೋದೆ ವಾದಿರಾಜ ಮಠದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಆಸ್ಪತ್ರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.
ಕೇಂದ್ರ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ ಎಸ್ಸೋ ನಾಯಕ್, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ವಿಧಾನಸಭೆಯ ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಶಾಸಕಿ ರೂಪಾಲಿ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್ ಮತ್ತು ಸಿದ್ದಲಿಂಗಪ್ಪ ಸಂಕನೂರು, ನ್ಯೂ ನರ್ಸಿಂಗ್ ಹೋಂ ಮಾಲೀಕ ಡಾ. ಎಸ್.ಆರ್. ನಾಯಕ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ್ ದೊಡ್ಡಮನಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಒಂದೇ ಸೂರಿನಡಿ ಸಮಗ್ರ ನೇತ್ರ ಚಿಕಿತ್ಸೆ
ಕಣ್ಣಿನ ಪೊರೆ, ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳು, ಮಕ್ಕಳ ನೇತ್ರ ಕಾಯಿಲೆಗಳು, ಮಳ್ಳೆಗಣ್ಣು ಹಾಗೂ ಗ್ಲಾಕೊಮಾ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಇದರೊಂದಿಗೆ ಆಂಬ್ಲಿಯೋಪಿಯಾ ಥೆರಪಿ, ಡ್ರೈ ಐ ಕ್ಲಿನಿಕ್ ಹಾಗೂ ಮಕ್ಕಳಲ್ಲಿ ಹೆಚ್ಚುತ್ತಿರುವ ಸಮೀಪದೃಷ್ಟಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮಯೋಪಿಯಾ ಕ್ಲಿನಿಕ್ ಕೂಡ ಕಾರ್ಯನಿರ್ವಹಿಸಲಿದೆ.
ಅಂತರರಾಷ್ಟ್ರೀಯ ಗುಣಮಟ್ಟದ ರೋಗ ಪತ್ತೆ ಮತ್ತು ಚಿಕಿತ್ಸಾ ಉಪಕರಣಗಳು, ಆಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ಅನುಭವಿ ವೈದ್ಯಕೀಯ ಸಿಬ್ಬಂದಿಯ ಸೇವೆ ಆಸ್ಪತ್ರೆಯ ವಿಶೇಷತೆಯಾಗಿರಲಿದೆ. ವಿಶೇಷ ತಜ್ಞ ವೈದ್ಯರು ನಿಗದಿತ ದಿನಗಳಲ್ಲಿ ಭೇಟಿ ನೀಡಿ ರೋಗಿಗಳಿಗೆ ತಪಾಸಣೆ, ಸಲಹೆ ಹಾಗೂ ಚಿಕಿತ್ಸೆಯನ್ನು ಒದಗಿಸಲಿದ್ದಾರೆ.
10ಕ್ಕೂ ಹೆಚ್ಚು ಕೇಂದ್ರಗಳ ಸೇವಾ ಅನುಭವ
ಉಡುಪಿ, ಮಂಗಳೂರು ಸೇರಿದಂತೆ ವಿವಿಧೆಡೆ 10ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಪ್ರಸಾದ್ ನೇತ್ರಾಲಯವು ಮಂಗಳೂರಿನ ಪಂಪ್ವೆಲ್ ಮತ್ತು ಲಾಲ್ಬಾಗ್, ಸುಳ್ಯ, ತೀರ್ಥಹಳ್ಳಿ, ಶಿವಮೊಗ್ಗ, ಪುತ್ತೂರು, ಗೋವಾ, ಕಾಸರಗೋಡು, ಮೂಡುಬಿದಿರೆ ಹಾಗೂ ಭಟ್ಕಳದಲ್ಲಿ ತನ್ನ ಸೇವಾ ಜಾಲವನ್ನು ವಿಸ್ತರಿಸಿದೆ. ಇದೀಗ ಕಾರವಾರದಲ್ಲಿ ಕೇಂದ್ರ ಆರಂಭಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಸುಧಾರಿತ ನೇತ್ರ ಚಿಕಿತ್ಸಾ ಸೇವೆಯನ್ನು ಇನ್ನಷ್ಟು ಹತ್ತಿರವಾಗಿಸುತ್ತಿದೆ.
ಕರ್ನಾಟಕ ಸರ್ಕಾರದ ವಿಷನ್ ಕಮಿಟಿ ಅಧ್ಯಕ್ಷರೂ ಆಗಿರುವ ಆಸ್ಪತ್ರೆಯ ಸಂಸ್ಥಾಪಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರ ನೇತೃತ್ವದಲ್ಲಿ ಕಾರವಾರ ಕೇಂದ್ರ ಕಾರ್ಯಾರಂಭ ಮಾಡಲಿದೆ. ನೇತ್ರ ತಜ್ಞ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ನಿರಂಜನ್ ಆರ್., ಡಾ. ಮೇಘಾ ಎಂ. ದಿವಾಕರ್ ಮತ್ತು ಡಾ. ಶರತ್ ಎಸ್. ಹೆಗ್ಡೆ ಅವರು ತಜ್ಞ ವೈದ್ಯಕೀಯ ಸೇವೆ ಒದಗಿಸಲಿದ್ದಾರೆ.
ಆಧುನಿಕ ಚಿಕಿತ್ಸಾ ಸೌಲಭ್ಯಗಳಿಗಾಗಿ ದೂರದ ನಗರಗಳನ್ನು ಅವಲಂಬಿಸಬೇಕಾಗಿದ್ದ ಜಿಲ್ಲೆಯ ಜನರಿಗೆ ಕಾರವಾರದಲ್ಲೇ ಸಮಗ್ರ ನೇತ್ರ ಚಿಕಿತ್ಸೆಯ ಅವಕಾಶ ಕಲ್ಪಿಸುವುದು ಈ ನೂತನ ಆಸ್ಪತ್ರೆಯ ಪ್ರಮುಖ ಉದ್ದೇಶವಾಗಿದೆ.


