ಕರಾವಳಿ ವಾಯ್ಸ್ ನ್ಯೂಸ್ 

ಹಳಿಯಾಳ : ಚಿಕ್ಕ ನೀರಾವರಿ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿದ ಜಿಲ್ಲೆಯ ಗುತ್ತಿಗೆದಾರರಿಗೆ ಬಾಕಿ ಹಣ ಹಂಚಿಕೆಯಲ್ಲಿ ಇಲಾಖೆಯ ಅಧಿಕಾರಿಗಳು ತಾರತಮ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಿ ಗುರುವಾರ ಹಳಿಯಾಳದ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಗುತ್ತಿಗೆದಾರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Banner Ad

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಉತ್ತರಕನ್ನಡ ಜಿಲ್ಲಾ ಗುತ್ತಿಗೆದಾರರ‌ ಸಂಘದ ಸದಸ್ಯರು ಹಳಿಯಾಳ‌ ಚಲೋ‌ ನಡೆಸಿದರು. ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಕಾರ್ಯವೈಖರಿ ಖಂಡಿಸಿದರು.

ಉತ್ತರಕನ್ನಡ ಜಿಲ್ಲೆಯ ಗುತ್ತಿಗೆದಾರರಿಗೆ ಚಿಕ್ಕ ನೀರಾವರಿ ಇಲಾಖೆಯಿಂದ‌ ಸುಮಾರು 385 ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಈ ನಡುವೆ ಬಿಡುಗಡೆಯಾದ ಹಣವನ್ನು ಹೊರ ಜಿಲ್ಲೆಯ ಅದರಲ್ಲೂ ಪ್ರಮುಖವಾಗಿ ದ.ಕನ್ನಡ ಮತ್ತು ಉಡುಪಿಯ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು‌ ಆರೋಪಿಸಿದರು.

ಪ್ರತಿ ಬಾರಿಯೂ ಸರ್ಕಾರದಿಂದ ಬಿಡುಗಡೆಯಾದ ಎಲ್‌ಓಸಿ ಹಂಚಿಕೆಯಲ್ಲಿ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲೆಯ ಗುತ್ತಿಗೆದಾರರನ್ನು ಕಡೆಗಣಿಸುತ್ತಿದ್ದಾರೆ. ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೂ ನಾವು ಕಾಮಗಾರಿಗೆ ವಿನಿಯೋಗಿಸಿದ ಹಣ ನಮ್ಮ ಕೈ ಸೇರಿಲ್ಲ. ಇದರಿಂದ ಗುತ್ತಿಗೆದಾರರ ಕುಟುಂಬದ ನಿರ್ವಹಣೆಯೂ ಕಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಗುತ್ತಿಗೆದಾರರ ಸಂಘದ ಸದಸ್ಯ ಪ್ರಶಾಂತ ನಾಯಕ ಮಾತನಾಡಿ, ಸಮಯಕ್ಕೆ ಸರಿಯಾಗಿ ಸರ್ಕಾರ ಗುತ್ತಿಗೆದಾರರ ಹಣ ಬಿಡುಗಡೆ ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಅನೇಕರ ಬಿಲ್ ಬಾಕಿ ಇದೆ. ಈ ಬಾರಿ ಬಿಡುಗಡೆ ಆದ 9 ಕೋಟಿ ಎಲ್‌ಓಸಿ ಬಿಡುಗಡೆಯಾಗುವಾಗಲೇ ಇಷ್ಟು ಹಣವನ್ನು ಇಂತಹ ಗುತ್ತಿಗೆದಾರರಿಗೆ ನೀಡಬೇಕು ಎಂದು ನಮೂದಿಸಲಾಗಿದೆ ಎಂದು ಆರೋಪಿಸಿದರು.

ಕೆಲ‌‌ ಹೊರ ಜಿಲ್ಲೆಯ ಪ್ರಭಾವಿ ಗುತ್ತಿಗೆದಾರರು, ರಾಜಕಾರಣಿಗಳ ಹಾಗೂ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ಕಾಮಗಾರಿಯ ಹಣ ಮಂಜೂರು ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ಹೊರ ಜಿಲ್ಲೆಯ ಗುತ್ತಿಗೆದಾರರೇ ಹೆಚ್ಚಾಗಿ ಒತ್ತಡ ಹೇರಿ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಾರೆ. ಹೀಗಾದರೆ ಜಿಲ್ಲೆಯ ಗುತ್ತಿಗೆದಾರರನ್ನು ಕಾಪಾಡುವವರು ಯಾರು ಎಂದು ಪ್ರಶ್ನಿಸಿದರು.

ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳು ಉತ್ತರಕನ್ನಡ ಜಿಲ್ಲೆಯ ಗುತ್ತಿಗೆದಾರರು ಮತ್ತು ಹೊರಜಿಲ್ಲೆಯ ಗುತ್ತಿಗೆದಾರರ ನಡುವೆ ತಾರತಮ್ಯ ಎಸಗುತ್ತಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚ ನೀಡಿದವರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ. ಕಾಮಗಾರಿ ಮಾಡಿದ ಹಣ ಮಂಜೂರಾಗದೇ ಜಿಲ್ಲೆಯ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಕೆಲ ಹೊರ ಜಿಲ್ಲೆಯ ಗುತ್ತಿಗೆದಾರರು ನಕಲಿ ದಾಖಲೆ ನೀಡಿ ಗುತ್ತಿಗೆ ಪಡೆದಿರುವ ಅನೇಕ ಉದಾಹರಣೆಗಳಿವೆ. ಕಾಮಗಾರಿಯ ಅನುಭವ ಇಲ್ಲದವರೂ ಸಹ ಬೃಹತ್ ಕಾಮಗಾರಿ ನಡೆಸುತ್ತಿದ್ದಾರೆ. ಮುಂದಿನ ದಿನದಲ್ಲಿ ಈ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನೂರಾರು ಜನ ಉತ್ತರಕನ್ನಡ ಜಿಲ್ಲೆಯ ಗುತ್ತಿಗೆದಾರರು ಚಿಕ್ಕ ನೀರಾವರಿ ಇಲಾಖೆಯ ಅಭಿಯಂತರರಾದ ಮಾರುತಿ ಗೋಕಾಕ್ ಅವರಿಗೆ‌ ಮನವಿ ನೀಡಿ ಕೂಡಲೇ ಜಿಲ್ಲೆಯ ಗುತ್ತಿಗೆದಾರರ ಹಿತ ಕಾಪಾಡುವಂತೆ ಆಗ್ರಹಿಸಿದರು.

ಗುತ್ತಿಗೆದಾರರು ಚಿಕ್ಕ ನೀರಾವರಿ ಇಲಾಖೆಯ ಅಭಿಯಂತರರಾದ ಮಾರುತಿ ಗೋಕಾಕ್ ಅವರಿಗೆ‌ ಮನವಿ ನೀಡಿದರು.

ಪ್ರತಿಭಟನೆಯಲ್ಲಿ ಕುಮಟಾದ ಪ್ರಶಾಂತ ಪಿ. ನಾಯ್ಕ, ಸಿದ್ಧಾಪುರದ ಸತೀಶ ಗೌಡ, ಜಯ‌ಶೆಟ್ಟಿ, ರಿಚರ್ಡ್ ಡಯಾಸ್, ರಾಘವೇಂದ್ರ ಶೆಟ್ಟಿ, ಕಿರಣ್ ಶೆಟ್ಟಣ್ಣನವರ್ , ನಾಗೇಶ್ ನಾಯ್ಕ ಕಲಭಾಗ, ಗಜಾನನ ಗುನಗಾ, ಗಣೇಶ ನಾಯ್ಕ, ಸುಧೀರ ಪಂಡಿತ, ದಾಮೋದರ್ ನಾಯ್ಕ ಸೇರಿದಂತೆ ಅನೇಕರು ಇದ್ದರು.

 

 

Please Share: