ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಹಾಸ್ಟೆಲ್‌ನಲ್ಲಿ ಸಮಯಕ್ಕೆ ಸರಿಯಾಗಿ ಸಮರ್ಪಕ ಊಟ ಸಿಗದೆ, ಕುಡಿಯಲು ಶುದ್ಧ ನೀರೂ ಇಲ್ಲದೆ ಮೂಲಸೌಕರ್ಯಗಳ ಕೊರತೆಯಿಂದ ಬೇಸತ್ತ ವಿದ್ಯಾರ್ಥಿಗಳು ಮಂಗಳವಾರ ರಾತ್ರಿ ಹಾಸ್ಟೆಲ್‌ ಮುಂಭಾಗವೇ ಕುಳಿತು ದಿಢೀರ್ ಉಪವಾಸ ಧರಣಿ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. ವಿದ್ಯಾರ್ಥಿಗಳ ಆಕ್ರೋಶದ ಪ್ರತಿಭಟನೆ ಕೆಲಕಾಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.

Banner Ad

ನಗರದ ಮುಲ್ಲಾ ಸ್ಟಾಫ್ ಬಳಿಯ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಘಟನೆ ನಡೆದಿದ್ದು, 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ನ ಅವ್ಯವಸ್ಥೆ ವಿರುದ್ಧ ಧರಣಿ ನಡೆಸಿದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಾಸ್ಟೆಲ್ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ರುಚಿಕರ ಹಾಗೂ ಪೌಷ್ಟಿಕ ಆಹಾರ ನೀಡುತ್ತಿಲ್ಲ ಎಂಬ ಆರೋಪ ಪ್ರತಿಭಟನೆಯ ಪ್ರಮುಖ ಕಾರಣವಾಗಿತ್ತು. ಇದರ ಜೊತೆಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ ಹಾಗೂ ಇತರ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆಯೂ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗಳನ್ನು ಹಲವು ವರ್ಷಗಳಿಂದ ಎಸ್‌ಎಫ್‌ಐ ಸಂಘಟನೆ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರುತ್ತಿದ್ದರೂ ಪರಿಹಾರವಾಗಿಲ್ಲ ಎಂದು ಆರೋಪಿಸಿದರು.

ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ಮತ್ತು ಉಪಹಾರ ನೀಡಬೇಕು. ಹಾಸ್ಟೆಲ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ತಕ್ಷಣ ಸ್ಥಾಪಿಸಿ, ಶೌಚಾಲಯಗಳನ್ನು ಸುಸಜ್ಜಿತಗೊಳಿಸಬೇಕು ಎಂದು ಆಗ್ರಹಿಸಿದರು.

ವಸತಿ ನಿಲಯಕ್ಕೆ ಸ್ವಂತ ಹಾಗೂ ಸುಸಜ್ಜಿತ ಖಾಯಂ ಕಟ್ಟಡ ನಿರ್ಮಿಸುವ ಜೊತೆಗೆ ವಿದ್ಯಾರ್ಥಿಗಳ ವ್ಯಾಸಂಗದ ಹಿತದೃಷ್ಟಿಯಿಂದ ಕಂಪ್ಯೂಟರ್ ಲ್ಯಾಬ್ ಮತ್ತು ಗ್ರಂಥಾಲಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ನೆರವಾಗಲು ಅಗತ್ಯ ಔಷಧಿಗಳಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಒದಗಿಸಬೇಕು ಎಂದು ಆಗ್ರಹಿಸಿದರು.

ರಾತ್ರಿ ವೇಳೆ ವಿದ್ಯಾರ್ಥಿಗಳು ಹಾಸ್ಟೆಲ್‌ ಮುಂಭಾಗವೇ ಧರಣಿಗೆ ಕುಳಿತ ಹಿನ್ನೆಲೆಯಲ್ಲಿ ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪಿಎಸ್‌ಐ ಉದ್ದಪ್ಪ ಧರೆಪ್ಪನವರ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ವಿದ್ಯಾರ್ಥಿಗಳ ಮನವೊಲಿಸಿ, ತಮ್ಮ ಬೇಡಿಕೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು.

ಪಿಎಸ್‌ಐ ಅವರ ಮನವೊಲಿಕೆಗೆ ಸ್ಪಂದಿಸಿದ ವಿದ್ಯಾರ್ಥಿಗಳು ರಾತ್ರಿ ನಡೆಸುತ್ತಿದ್ದ ಉಪವಾಸ ಧರಣಿಯನ್ನು ಸ್ಥಗಿತಗೊಳಿಸಿದರು.

ಈ ಕುರಿತು ಎಸ್‌ಎಫ್‌ಐ ತಾಲೂಕು ಸಂಚಾಲಕ ವೀರೇಶ ರಾಠೋಡ ಮಾತನಾಡಿ, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಎಸ್‌ಎಫ್‌ಐ ಉತ್ತರ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹಾಸ್ಟೆಲ್‌ನಲ್ಲಿ ಓದಿ ಭವಿಷ್ಯ ಕಟ್ಟಿಕೊಳ್ಳಬೇಕಾದ ವಿದ್ಯಾರ್ಥಿಗಳು ಅನ್ನ, ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ರಾತ್ರಿ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸಮಾಜ ಕಲ್ಯಾಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡಿಸಿದೆ.

 

 

 

 

Please Share: