ಕರಾವಳಿ ವಾಯ್ಸ್ ನ್ಯೂಸ್ 

ಜೊಯಿಡಾ: ಭಕ್ತರ ನಂಬಿಕೆಯ ಕೇಂದ್ರವಾಗಿರುವ ರಾಮನಗರದ ದೇವಾಲಯದಲ್ಲಿ ರಾತ್ರಿ ಕಳ್ಳರ ಕೈಚಳಕ ನಡೆದಿದೆ. ದೇವಾಲಯದ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಬೆಳ್ಳಿ ನಾಗಮೂರ್ತಿಗಳೊಂದಿಗೆ ಕಾಣಿಕೆ ಡಬ್ಬಿಯಲ್ಲಿದ್ದ ₹12 ಸಾವಿರಕ್ಕೂ ಅಧಿಕ ಹಣವನ್ನು ಹೊತ್ತೊಯ್ದಿದ್ದಾರೆ.

Banner Ad

ರಾಮನಗರದ ಸಾತೇರಿ ಹಾಗೂ ನಾಗನಾಥ ದೇವಾಲಯಗಳು ಒಂದೇ ಆವರಣದಲ್ಲಿವೆ. ರಾತ್ರಿ ವೇಳೆ ದೇವಾಲಯದ ಬೀಗ ಮುರಿದ ಕಳ್ಳರು ನಾಗನಾಥ ದೇವಾಲಯ ಪ್ರವೇಶಿಸಿ ಅಲ್ಲಿದ್ದ ಮೂರು ಬೆಳ್ಳಿ ನಾಗಮೂರ್ತಿಗಳನ್ನು ಕಳವು ಮಾಡಿದ್ದಾರೆ. ಬಳಿಕ ಕಾಣಿಕೆ ಡಬ್ಬಿಯನ್ನೂ ಒಡೆದು ಹಣ ದೋಚಿದ್ದಾರೆ.

ಬೆಳಗಿನ ಜಾವ ಪೂಜೆಗೆ ಅರ್ಚಕರು ಬಂದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ದೇವಾಲಯದ ಬೀಗ ಮುರಿದಿರುವುದು ಕಂಡುಬಂದ ಬಳಿಕ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದ್ದು, ರಾಮನಗರ ಪೊಲೀಸರಿಗೆ ವಿಷಯ ತಿಳಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಕಳ್ಳರು ದೇವಾಲಯ ಪ್ರವೇಶಿಸಿದ ಹಾಗೂ ಪರಾರಿಯಾದ ಮಾರ್ಗದ ಕುರಿತು ಮಾಹಿತಿ ಕಲೆಹಾಕಲಾಗುತ್ತಿದ್ದು, ಸಿಸಿಟಿವಿ ದೃಶ್ಯಗಳಿದ್ದರೆ ಅವುಗಳನ್ನೂ ಪರಿಶೀಲಿಸಲಾಗುತ್ತಿದೆ.

ಆರಾಧನಾ ಕೇಂದ್ರದಲ್ಲೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕಳವಾದ ಬೆಳ್ಳಿ ನಾಗಮೂರ್ತಿಗಳು ಹಾಗೂ ಹಣವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹ ಕೇಳಿಬಂದಿದೆ.

 

 

Please Share: