ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಿಕ್ಷೆ ನೀಡಿ, ಅದರಲ್ಲಾದರೂ ಆಡಳಿತ ನಡೆಸಲಿ ಎಂದು ವ್ಯಂಗ್ಯವಾಡಿದ ಬಿಜೆಪಿ ಕಾರ್ಯಕರ್ತರು, ಭಿಕ್ಷೆ ಸಂಗ್ರಹಿಸುವ ಮೂಲಕ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

Banner Ad

ಬಸ್ ಪ್ರಯಾಣ ದರ, ಹಾಲು ಹಾಗೂ ಮೊಸರಿನ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಕಾರವಾರದಲ್ಲಿ ಪ್ರತಿಭಟನೆ ನಡೆಯಿತು. ಸುಭಾಷ್ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಜನಸಾಮಾನ್ಯರ ಮೇಲೆ ನಿರಂತರ ಬೆಲೆ ಏರಿಕೆಯ ಹೊರೆ ಹಾಕುತ್ತಿದೆ. ಸರ್ಕಾರಕ್ಕೆ ಭಿಕ್ಷೆ ನೀಡುತ್ತೇವೆ, ಅದರಲ್ಲಾದರೂ ಆಡಳಿತ ನಡೆಸಲಿ. ರೈತರ ಹೆಸರಿನಲ್ಲಿ ಜನರ ಮೇಲೆ ಹೊರೆ ಹಾಕುವುದನ್ನು ಸಹಿಸುವುದಿಲ್ಲ ಎಂದರು.

ಹಾಲಿನ ಜೊತೆಗೆ ಮೊಸರು, ಬೆಣ್ಣೆ, ತುಪ್ಪದ ಬೆಲೆಯನ್ನೂ ಹೆಚ್ಚಿಸಲಾಗಿದೆ. ರೈತರಿಗೆ ನೀಡಬೇಕಾದ ಹಣವನ್ನು ಸರ್ಕಾರದ ಖಜಾನೆಯಿಂದ ಭರಿಸಲಿ. ಸಾರಿಗೆ ದರ ಏರಿಸಿ ಬಡವರನ್ನು ಶೋಷಿಸಲಾಗುತ್ತಿದೆ. ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಸಿಬ್ಬಂದಿಗೆ ಸೌಲಭ್ಯಗಳಿಲ್ಲ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಪಕ ಹಣ ನೀಡಲು, ಗುತ್ತಿಗೆದಾರರ ಬಿಲ್ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸಿದರು.

ಹೊಸ ಯೋಜನೆಗಳನ್ನು ಘೋಷಿಸದಂತೆ ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಪತ್ರ ಬರೆದಿರುವುದು ಆಡಳಿತದ ಆರ್ಥಿಕ ಸ್ಥಿತಿಗೆ ಸಾಕ್ಷಿ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ, ಆಡಳಿತ ನಡೆಸುವ ಇಚ್ಛಾಶಕ್ತಿಯೂ ಇಲ್ಲ. ಕಾರವಾರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮಾಜಿ ಶಾಸಕರ ಅವಧಿಯ ಅನುದಾನದಿಂದಲೇ ಹೊರತು ಕಾಂಗ್ರೆಸ್ ಸರ್ಕಾರದ ಕೊಡುಗೆಯಲ್ಲ ಎಂದು ಕಾಗೇರಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಹಗರಣಗಳ ಸರಮಾಲೆಯೇ ಮುಂದುವರಿದಿದ್ದು, ಕೆಪಿಎಸ್‌ಸಿ ಹಗರಣವೂ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸರ್ಕಾರ ಅಬಕಾರಿ ಆದಾಯವನ್ನೇ ನೆಚ್ಚಿಕೊಂಡಿದೆ. ಕುಡಿಯುವ ನೀರಿಗೂ ಪರದಾಡುವ ಬಡವರಿಗೆ ಮದ್ಯ ಕುಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.

ನಗರದ ಕುಡಿಯುವ ನೀರಿನ ಅವ್ಯವಸ್ಥೆ, ನಿರಂತರ ವಿದ್ಯುತ್ ಕಡಿತ, ಹದಗೆಟ್ಟ ರಸ್ತೆಗಳು ಹಾಗೂ ಸಾರಿಗೆ ಸಮಸ್ಯೆಗಳನ್ನೂ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಾಗರಾಜ ನಾಯಕ,ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

Please Share: