ಕರಾವಳಿ ವಾಯ್ಸ್ ನ್ಯೂಸ್ 

Banner Ad

ದಾಂಡೇಲಿ: ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಿರಿಯ ಅಭಿಯಂತರರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬರ್ಚಿ–ಕರ್ಕಾ ರಸ್ತೆಯ ಬೇಡರ ಶಿರಗೂರು ಬಳಿ ನಡೆದಿದೆ.

ಮೃತರನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ಮಹೇಶ ಶೇಖಪ್ಪ ತಳವಾರ (33) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರು ಗದಗದ ರಾಜೀವ್ ಗಾಂಧಿನಗರ ನಿವಾಸಿ ಹಾಗೂ ಹಿರಿಯ ಸೆಕ್ಷನ್ ಅಭಿಯಂತರ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57).

ಅಳ್ನಾವರ–ಅಂಬೇವಾಡಿ ಸೆಕ್ಷನ್‌ನ ಎಲ್‌ಸಿ ನಂ.11ರಲ್ಲಿ ಕರ್ಕಾ–ಬರ್ಚಿ ರೈಲು ಮಾರ್ಗದ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾಮಗಾರಿಗಾಗಿ ತೆಗೆದಿದ್ದ ಮಣ್ಣು ಏಕಾಏಕಿ ಕುಸಿದು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ಬಿದ್ದಿದೆ. ಮಣ್ಣಿನಡಿ ಸಿಲುಕಿದ ಮಹೇಶ ಮೃತಪಟ್ಟಿದ್ದು, ಗಾಯಗೊಂಡ ಮಕ್ತುಂ ಹುಸೇನ್ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ್ ಹಾಗೂ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Please Share: