ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕೊಳಗಿಬೀಸ್ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭಟ್ಕಳದಿಂದ ಹುಬ್ಬಳ್ಳಿ ಮಾರ್ಗವಾಗಿ ಮುದ್ದೇಬಿಹಾಳ ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಹಾಗೂ ಶಿರಸಿಯಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಚಿಕ್ಕಬಳ್ಳಾಪುರ ಮೂಲದ ಕಾಲೇಜು ವಿದ್ಯಾರ್ಥಿಗಳಿದ್ದ ಖಾಸಗಿ ಬಸ್ಸು ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಎರಡು ವಾಹನಗಳ ಮುಂಭಾಗ ಸಂಪೂರ್ಣವಾಗಿ ಜಕಂಗೊಂಡಿದೆ.
ಅಪಘಾತದಲ್ಲಿ ಸಾರಿಗೆ ಭಟ್ಕಳ ಡಿಪೋದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಮಾರುತಿ ದೇವಪ್ಪ ತಳವಾರ (31), ನಿರ್ವಾಹಕ ಮಂಜುನಾಥ ಶ್ರೀರಾಜಶೇಖರ ಭಜಂತ್ರಿ (33) ಸೇರಿದಂತೆ ಪ್ರಯಾಣಿಕರಾದ ತಾರಾಮತಿ ಅಶೋಕ ಬಿರಾದಾರ (28), ಅಶ್ವಿನಿ ರಮೇಶ ಪಾಟೀಲ (30), ಶೋಭಶ್ರೀ ಪರೀಠ (41), ಮಾಲಾ ರಾಮಪ್ಪ ಪಾಟೀಲ (50), ಕೀರ್ತಿ ರಾಮಪ್ಪ ಪಾಟೀಲ (22), ಯಶಸ್ವಿನಿ ಬಸವರಾಜ ಪರೀಠ (17) ಗಾಯಗೊಂಡಿದ್ದಾರೆ.
ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಬಳ್ಳಾಪುರದ ವಿಶ್ವ ವಿವೇಕ ಕಾಲೇಜಿನ ಪ್ರಾಂಶುಪಾಲ ಅಂಜನಪ್ಪ ಶ್ರೀನಿವಾಸ ಎಣ್ಣೆನಳ್ಳಿ (39), ಉಪನ್ಯಾಸಕರಾದ ಶಗುಫ್ತಾ ಶೇರ್ ಪೀರ್ (27), ಬಬಿತಾ ದೇವಕೃಷ್ಣಪ್ಪ (28), ರಜನಿ ರವನಪ್ಪ (26), ವರಲಕ್ಷ್ಮೀ ಕೆ ಹಾಗೂ ವಿದ್ಯಾರ್ಥಿಗಳಾದ ಉಷಾ ರತ್ನಕುಮಾರ (20), ಸಿಂಧೂ ಮೂರ್ತಿ (20), ಅರ್ಚನಾ (22), ಸಂಗೀತಾ ಮುನಿರಾಜು (23), ಪ್ರಗತಿ ನಾರಾಯಣಸ್ವಾಮಿ (20), ಪವಿತ್ರಾ ಎಂ (20), ದೇವರಾಜ ಮುನಿಯಪ್ಪ (23), ಚಿರುವರ್ಧನ ಅರುಣಕುಮಾರ (10), ರಾಮಣ್ಣ ತಮ್ಮಾರೆಡ್ಡಿ (38), ಮನ್ವಿತ ಅಂಜನಪ್ಪ (10), ಮನೋಜ ಗಂಗಾಧರಪ್ಪ (29), ರೇವತಿ ಮುನಿಕೃಷ್ಣಪ್ಪ (25) ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಅಂಬ್ಯುಲೆನ್ಸ್ಗಳ ಮೂಲಕ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.
ಅಪಘಾತಕ್ಕೆ ಕಾರಣನಾದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಡಿಎಸ್ಪಿ ಗೀತಾ ಪಾಟೀಲ, ಶಿರಸಿ ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಸಂತೋಷಕುಮಾರ ಎಂ, ಅಶೋಕ ರಾಠೋಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

