ದಾಂಡೇಲಿ: ದಾಂಡೇಲಿ–ಹಳಿಯಾಳ ರಾಜ್ಯ ಹೆದ್ದಾರಿಯ ತಾಟಗೇರಾ ಕ್ರಾಸ್ ಸಮೀಪ ಮಂಗಳವಾರ ರಾತ್ರಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಡಕಾನಶಿರಡಾ ಗ್ರಾಮದ ನಿವಾಸಿ ಪಾರ್ವತಿ ಶಂಕರ ಕಾಂಬ್ರೇಕರ (50) ಮೃತಪಟ್ಟವರು. ಅವರು ಪತಿ ಶಂಕರ ಸಿದ್ದಪ್ಪ ಕಾಂಬ್ರೇಕರ ಅವರೊಂದಿಗೆ ಮೊಮ್ಮಗನನ್ನು ನೋಡಲು ಆಲೂರಿನಲ್ಲಿರುವ ಮಗಳ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಕೆಎ-30-ಎ-2235 ನೋಂದಣಿ ಸಂಖ್ಯೆಯ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಪಾರ್ವತಿ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದು, ಶಂಕರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಗಾಯಗೊಂಡ ಪತ್ನಿಯನ್ನು ಸಾರಿಗೆ ಬಸ್‌ನಲ್ಲಿ ದಾಂಡೇಲಿಗೆ ಕರೆತಂದು, ಅಲ್ಲಿಂದ ಪೊಲೀಸರು ಆಟೋರಿಕ್ಷಾದ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಪಾರ್ವತಿ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಅಪಘಾತದ ಬಳಿಕ ಬೊಲೆರೋ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಘಟನೆ ನಡೆದ ಒಂದು ಗಂಟೆಯೊಳಗೆ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ವಾಹನವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಮೃತದೇಹವನ್ನು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಶಿವಾನಂದ ಅಂಬಿಗೇರ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬುಧವಾರ ಬೆಳಗ್ಗೆ ಸಿಪಿಐ ಶಿವಾನಂದ ಅಂಬಿಗೇರ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಪ್ರಕರಣ ದಾಖಲಿಸಿಕೊಂಡಿರುವ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Please Share: