ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಜು. 8: ತಾಲೂಕಿನ ಮುದಗಾ ಸಮೀಪದ ರೈಲು ಸುರಂಗ (ಟನೆಲ್) ಬಳಿ ರೈಲ್ವೆಗೆ ಸಿಲುಕಿ ಎರಡು ಕಡವೆಗಳು ಮೃತಪಟ್ಟಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತ ಪ್ರಾಣಿಗಳಲ್ಲಿ ಸುಮಾರು 6–7 ವರ್ಷದ ಹೆಣ್ಣು ಹಾಗೂ ಗಂಡು ಕಡವೆ ಸೇರಿವೆ.
ಪ್ರಾಥಮಿಕ ಮಾಹಿತಿಯಂತೆ, ಘಟನೆ ಮಂಗಳವಾರ ತಡರಾತ್ರಿ ನಡೆದಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಸ್ಥಳ ಪರಿಶೀಲನೆ ವೇಳೆ ಮೃತಪಟ್ಟ ಕಡವೆಗಳ ಕಾಲುಗಳನ್ನು ಕತ್ತರಿಸಿ ದುಷ್ಕರ್ಮಿಗಳು ಹೊತ್ತೊಯ್ದಿರುವುದು ಕಂಡುಬಂದಿದ್ದು, ವನ್ಯಜೀವಿ ಮಾಂಸಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆರ್ಎಫ್ಒ ಕಿರಣ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿ, ಮೃತದೇಹಗಳ ಅವಶೇಷಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಮುದಗಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ತೀವ್ರ ಶೋಧ ಕಾರ್ಯ ಆರಂಭಿಸಿದೆ. ಮೃತ ಕಡವೆಗಳ ಮಾಂಸ ಕದ್ದೊಯ್ದಿರುವ ಆರೋಪದಡಿ ಪ್ರಕರಣ ದಾಖಲಿಸಲು ಇಲಾಖೆ ಮುಂದಾಗಿದೆ.
ಈ ಪ್ರಕರಣದಲ್ಲಿ ರೈಲ್ವೆ ಅಪಘಾತದಿಂದ ಕಡವೆಗಳು ಮೃತಪಟ್ಟಿವೆಯೇ ಅಥವಾ ಅಪಘಾತದ ಬಳಿಕ ದುಷ್ಕರ್ಮಿಗಳು ಅವುಗಳ ಅಂಗಗಳನ್ನು ಕತ್ತರಿಸಿ ಕೊಂಡೊಯ್ದಿದ್ದಾರೆಯೇ ಎಂಬ ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ತನಿಖೆಯ ನಂತರ ಘಟನೆಯ ನಿಖರ ಕಾರಣ ಹಾಗೂ ದುಷ್ಕರ್ಮಿಗಳ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.
