ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಹೊಸಕಂಬಿ ವಲಯದ ಅರಣ್ಯ ಪ್ರದೇಶದಲ್ಲಿ ಅಖಿಲ ಭಾರತ ಹುಲಿ ಗಣತಿಗಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಅತ್ಯಾಧುನಿಕ ಆಫ್ಲೈನ್ ಕ್ಯಾಮೆರಾಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಹಿಲ್ಲೂರು ಸಮೀಪದ ಕೋಳಗಿ ನಿವಾಸಿ, ಕೂಲಿ ಕಾರ್ಮಿಕ ದುರ್ಗಾ ದೇವು ಹರಿಕಾಂತ್ರ (54) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕಳುವಾಗಿದ್ದ ಎಲ್ಲಾ ಕ್ಯಾಮೆರಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಖಿಲ ಭಾರತ ಹುಲಿ ಗಣತಿ ಹಿನ್ನೆಲೆಯಲ್ಲಿ ಕಳೆದ ಮೇ 1ರಂದು ಹೊಸಕಂಬಿ ವಲಯದ ದಟ್ಟ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಲನವಲನ ದಾಖಲಿಸಲು ಅರಣ್ಯ ಇಲಾಖೆ ‘ಕಡಿಬ್ಯಾಕ್’ (Cuddeback) ಕಂಪನಿಯ ಆಫ್ಲೈನ್ ಕ್ಯಾಮೆರಾಗಳನ್ನು ಅಳವಡಿಸಿತ್ತು. ಮೇ 12ರ ಮಧ್ಯಾಹ್ನದಿಂದ ಮೇ 13ರ ಬೆಳಗಿನ ಜಾವದ ನಡುವೆ ಆರೋಪಿ ಅರಣ್ಯ ಪ್ರದೇಶಕ್ಕೆ ನುಗ್ಗಿ ಕ್ಯಾಮೆರಾಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಈ ಸಂಬಂಧ ಹಿಲ್ಲೂರು ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ಅವರು ಮೇ 16ರಂದು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.
ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕ್ಯಾಮೆರಾಗಳನ್ನು ಕಳವು ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಬಳಿಕ ಆರೋಪಿಯ ಬಳಿ ಬಚ್ಚಿಡಲಾಗಿದ್ದ ಎಲ್ಲಾ ಕ್ಯಾಮೆರಾಗಳನ್ನು ಮಹಜರ್ ಮೂಲಕ ಜಪ್ತಿ ಮಾಡಲಾಗಿದೆ.
