ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆತಂಕ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ನ್ಯಾಯಾಲಯದ ಆವರಣದಲ್ಲೇ ನಿಲ್ಲಿಸಿದ್ದ ನ್ಯಾಯವಾದಿಯೊಬ್ಬರ ವಾಹನವನ್ನು ದುಷ್ಕರ್ಮಿಗಳು ಹಾನಿಗೊಳಪಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Banner Ad

ನ್ಯಾಯವಾದಿ ಸವಿತಾ ದೀಪಕ್ ಐತಾಳ ಅವರು ಮಾರ್ಚ್ 25ರಂದು ಬೆಳಗ್ಗೆ ಸುಮಾರು 11 ಗಂಟೆಗೆ ತಮ್ಮ ಮಹೇಂದ್ರ ಥಾರ್ ವಾಹನದಲ್ಲಿ ಶಿರಸಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ಬಳಿಕ ತಮ್ಮ ವಾಹನವನ್ನು ಕೋರ್ಟ್ ಆವರಣದಲ್ಲಿ ನಿಲ್ಲಿಸಿ ವೃತ್ತಿ ಕಾರ್ಯಕ್ಕಾಗಿ ಒಳಗೆ ತೆರಳಿದ್ದರು.

ಮಧ್ಯಾಹ್ನ ಸುಮಾರು 2 ಗಂಟೆಗೆ ವಾಪಸ್ಸು ಬಂದಾಗ, ಅವರ ವಾಹನದ ಎಡಭಾಗದ ಬಾಗಿಲಿಗೆ ಯಾರೋ ದುಷ್ಕರ್ಮಿಗಳು ಯಾವುದೋ ವಸ್ತುವಿನಿಂದ ಗೀಚಿ ಹಾನಿ ಮಾಡಿರುವುದು ಗಮನಕ್ಕೆ ಬಂದಿದೆ. ಈ ಘಟನೆ ವಕೀಲೆಯಲ್ಲಿ ಆತಂಕ ಹುಟ್ಟಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಜೀವಕ್ಕೂ ಅಪಾಯ ಉಂಟಾಗುವ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಕೃತ್ಯದಿಂದ ತಮ್ಮ ವೃತ್ತಿಜೀವನಕ್ಕೂ ತೊಂದರೆ ಉಂಟಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಅವರು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೋರ್ಟ್ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆ ಎಬ್ಬಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

 

 

Please Share: