ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ನಿವೃತ್ತ ನೌಕರರೊಬ್ಬರಿಂದ ₹10.60 ಲಕ್ಷ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧ ಪ್ರಕರಣ ದಾಖಲಾಗಿದೆ.
ಪೀಡಿತರಾದ ದಿವಾಕರ ನಾರಾಯಣ (66), ಸಾಯಿನಗರ ನಿವಾಸಿ, ನಿವೃತ್ತ ರಕ್ಷಣಾ ಸೇವಾ ನೌಕರರಾಗಿದ್ದಾರೆ. ಅವರು ಪತ್ನಿಯೊಂದಿಗೆ ವಾಸವಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಂಟಿ ಬ್ಯಾಂಕ್ ಖಾತೆ ಹೊಂದಿದ್ದಾರೆ.
ದೂರಿನ ಪ್ರಕಾರ, 2025ರಲ್ಲಿ ಪೀಡಿತರ ಪತ್ನಿ ಫೇಸ್ಬುಕ್ನಲ್ಲಿ “ಹಣ ಹೂಡಿಕೆ ಮಾಡಿ ಡಾಲರ್ ರೂಪದಲ್ಲಿ ಹೆಚ್ಚಿನ ಲಾಭ ಪಡೆಯಿರಿ” ಎಂಬ ಜಾಹೀರಾತನ್ನು ನೋಡಿ ಅದನ್ನು ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದರು. ಬಳಿಕ ಅಪರಿಚಿತರು ಹಲವು ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಹಾಗೂ ವಾಟ್ಸಪ್ ಸಂದೇಶಗಳನ್ನು ಕಳುಹಿಸಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ.
ಆರೋಪಿತರು “quantro-ai.com” ಎಂಬ ವೆಬ್ಸೈಟ್ಗೆ ಸಂಪರ್ಕಿಸಲು ಸೂಚಿಸಿ, ಅದರಲ್ಲಿ ಖಾತೆ ತೆರೆಯುವಂತೆ ಹೇಳಿ ಆರಂಭದಲ್ಲಿ ₹10,000 ಹಾಗೂ ₹12,000 ನೋಂದಣಿ ಶುಲ್ಕವಾಗಿ ಪಡೆದುಕೊಂಡಿದ್ದಾರೆ. ನಂತರ ನಕಲಿ ಲಾಭಾಂಶ ತೋರಿಸಿ ಪೀಡಿತರಲ್ಲಿ ನಂಬಿಕೆ ಮೂಡಿಸಿದ್ದಾರೆ.
ಮುಂದೆ, “ನಿಮ್ಮ ಹಣ ಡಾಲರ್ನಲ್ಲಿ ಇದೆ, ಅದನ್ನು ವಾಪಸು ಪಡೆಯಲು ಹೆಚ್ಚುವರಿ ಶುಲ್ಕ ಪಾವತಿಸಬೇಕು” ಎಂದು ಹೇಳಿ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮತ್ತು ನಂತರ ಫೆಬ್ರವರಿಯಿಂದ ಏಪ್ರಿಲ್ ತನಕ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹10,60,436 ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಆದರೆ ನಂತರ ಹಣ ವಾಪಸು ಸಿಗದೇ, ಬ್ಯಾಂಕ್ನಿಂದ ಈ ವ್ಯವಹಾರಗಳು ಸೈಬರ್ ಕ್ರೈಂ ಸಂಬಂಧಿತ ಖಾತೆಗಳಿಗೆ ಹೋಗಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಪೀಡಿತರು ಮೋಸಗೊಂಡಿರುವುದನ್ನು ಅರಿತು ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಬಿಎನ್ಎಸ್-2023ರ ಕಲಂ 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಸಿ), 66(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
