ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಅಂಗಡಿ ಮುಂದೆ ಗಲಾಟೆ ಮಾಡಿದ ವಿಚಾರವಾಗಿ ವ್ಯಕ್ತಿಯೊಬ್ಬನು ಕಬ್ಬಿಣದ ಸುತ್ತಿಗೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಈ ಕುರಿತು ಮೊಹಮ್ಮದ್ ರಾಹೀದ್ ಶೇಖ್ (27) ನೀಡಿದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಬಂದರ್ ರಸ್ತೆಯ ಅಶೂರಖಾನ್ ಗಲ್ಲಿಯಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದಾರೆ.
ದೂರಿನ ಪ್ರಕಾರ, ಆರೋಪಿತ ಖಲೀಲ್ @ ಉಸ್ಮಾನ್ (52) ಆಗಾಗ ಅಂಗಡಿ ಬಳಿ ಬಂದು ತೊಂದರೆ ನೀಡುತ್ತಿದ್ದ. ಗುರುವಾರ ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಮತ್ತೆ ಅಂಗಡಿ ಎದುರು ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಇದಕ್ಕೆ ಪ್ರಶ್ನಿಸಿದಾಗ ಸಿಟ್ಟಿಗೆದ್ದ ಆರೋಪಿಯು ತನ್ನ ಬಳಿ ಇದ್ದ ಕಬ್ಬಿಣದ ಸುತ್ತಿಗೆಯಿಂದ ರಾಹೀದ್ ಅವರ ತಲೆಗೆ ಹೊಡೆದು ಗಾಯಪಡಿಸಿದ್ದಾನೆ.
ಇನ್ನಷ್ಟು, ತಪ್ಪಿಸಿಕೊಂಡು ಹೋಗಲು ಯತ್ನಿಸಿದ ವೇಳೆ ಅವರನ್ನು ಅಡ್ಡಗಟ್ಟಿ ಕಾಲಿನಿಂದ ಒದ್ದು, ರಾಹೀದ್ ಹಾಗೂ ಅವರ ತಂದೆಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಾಳುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

