ಕರಾವಳಿ ವಾಯ್ಸ್ ನ್ಯೂಸ್
ಸಿದ್ದಾಪುರ: ಶಿರಳಗಿ ಗ್ರಾಮ ಪಂಚಾಯತ್ ಪಿಡಿಓ ರಾಜೇಶ ನಾಯ್ಕರ ವಿರುದ್ಧ ಲಂಚ ಬೇಡಿಕೆ ಹಾಗೂ ಹಲ್ಲೆ ಆರೋಪ ಕೇಳಿಬಂದಿದೆ. ಈ ಕುರಿತು ಗಾಯಗೊಂಡ ಪ್ರಭು ದೊಡ್ಡಮನಿ ಅವರ ಪತ್ನಿ ಕಾವ್ಯಶ್ರೀ ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ.
ಕಾವ್ಯಶ್ರೀ ಅವರ ದೂರಿನ ಪ್ರಕಾರ “ನಮ್ಮ ಗಂಡ ಉದ್ಯಮ ಆರಂಭಿಸಲು ಅರ್ಜಿ ಸಲ್ಲಿಸಿದ್ದರು. 8 ದಿನ ಕಳೆದರೂ ಪ್ರಮಾಣಪತ್ರ ಸಿಕ್ಕದ ಹಿನ್ನೆಲೆ ಗ್ರಾಮ ಪಂಚಾಯತ್‌ಗೆ ತೆರಳಿ ವಿಚಾರಿಸಿದಾಗ ಹೆಚ್ಚುವರಿ ದಾಖಲೆಗಳು ಹಾಗೂ ಬಾಂಡ್ ಪೇಪರ್ ಬೇಕೆಂದು ತಿಳಿಸಿದರು. ನಂತರ ಕೆಲಸ ಬೇಗ ಮಾಡಬೇಕಾದರೆ 2 ಸಾವಿರ ರೂ. ಲಂಚ ನೀಡಬೇಕು ಎಂದು ಪಿಡಿಓ ಸ್ಪಷ್ಟವಾಗಿ ಹೇಳಿದ್ದಾರೆ. ಮೇಲಾಧಿಕಾರಿಗಳಿಗೆ ಸಹ ಹಣ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.” ಎಂದು ಆರೋಪಿಸಿದ್ದಾರೆ.
ಅವರು ಮುಂದುವರೆದು ಮಾತನಾಡಿ, “ನಾವು ಕೂಲಿ ಕಾರ್ಮಿಕರು. ಅಷ್ಟು ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದಾಗ ಪಿಡಿಓ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಸುಕಿ ಹಲ್ಲೆ ನಡೆಸಿದ್ದಾರೆ. ಅಲ್ಲಿದ್ದ ಸಿಬ್ಬಂದಿಯೂ ಪಿಡಿಓಗೆ ಬೆಂಬಲ ನೀಡಿದ್ದರು.” ಎಂದೂ ಆರೋಪಿದರು.
ಘಟನೆಯ ನಂತರ ಗಾಯಗೊಂಡ ಪ್ರಭು ದೊಡ್ಡಮನಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಆಸ್ಪತ್ರೆಗೆ ಬಂದು ಹೇಳಿಕೆ ಪಡೆದಿದ್ದಾರೆ. ಬಳಿಕ ದೂರು ನೀಡಲು ಸೂಚಿಸಿದರೂ, ಸಂಜೆ ಪೊಲೀಸ್ ಠಾಣೆಗೆ ಹೋದಾಗ ಕೇವಲ ಸ್ವೀಕೃತಿ ನೀಡಿದ ಮೇಲೆ ಮರುದಿನ ಬನ್ನಿ ಎಂದು ಕಳುಹಿಸಲಾಗಿದೆ. ಮರುದಿನ ಎಫ್ ಐಆರ್ ಪಡೆದರೂ, ಮೊದಲು ಸಲ್ಲಿಸಿದ ದೂರು ಪರಿಗಣಿಸಲಾಗದೇ, ಪಿಡಿಓ ನೀಡಿದ ದೂರಿಗೆ ಆದ್ಯತೆ ನೀಡಲಾಗಿದೆ ಎಂದು ಕಾವ್ಯಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವ್ಯಶ್ರೀ ಅವರು ಮೇಲಾಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಪಿಡಿಓ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.

