ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66 ರ ಬಿಣಗಾ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ, ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

Banner Ad

ಕಾರವಾರದಿಂದ ಅಂಕೋಲಾ ಕಡೆಗೆ ಸಾಗುತ್ತಿದ್ದ ಡಾಂಬರ್ ಟ್ಯಾಂಕರ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರನ ತಲೆಯ ಮೇಲೆ ಟ್ಯಾಂಕರ್ ಹರಿದು ಹೋಗಿದೆ. ಅಪಘಾತದ ತೀವ್ರತೆಯಿಂದಾಗಿ ಮೃತದೇಹ ಸಂಪೂರ್ಣವಾಗಿ ಜರ್ಜರಿತಗೊಂಡಿದ್ದು, ಮುಖ ಚಹರೆ ಪತ್ತೆಯಾಗದ ಸ್ಥಿತಿಯಲ್ಲಿದೆ.

ಅಪಘಾತದ ನಂತರ ಟ್ಯಾಂಕರ್ ಬಿಟ್ಟು ಪಲಾಯನ ಮಾಡಲು ಯತ್ನಿಸಿದ ಚಾಲಕನನ್ನು, ಸಂಚಾರ ಠಾಣೆಯ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ದಿನಕರ್ ಗುನಗಿ (56) ಎಂದು ಗುರುತಿಸಲಾಗಿದ್ದು, ಅವರು ಕಾರವಾರದ ಡಿಡಿಪಿಐ ಕಚೇರಿಯಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮರಣಕುಪವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

Please Share: