ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ತಾಲೂಕಿನ ತದಡಿ ಬಂದರು ಅಳಿವೆಯಲ್ಲಿ ಮೀನುಗಾರಿಕಾ ಬೋಟ್‌ವೊಂದು ಮುಳುಗಡೆಯಾಗಿ, ಅದರಲ್ಲಿದ್ದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ರವಿವಾರ ಮುಂಜಾನೆ ನಡೆದಿದೆ.

ತದಡಿ ಬಂದರಿನ ಅಳಿವೆಯಲ್ಲಿ ಮೋಹನ್ ಕಿಮಾನಿ ಮಾಲೀಕತ್ವದ ‘ಶ್ರೀದೇವಿ’ ಹೆಸರಿನ ಮೀನುಗಾರಿಕಾ ಬೋಟ್‌ ಮುಳುಗಡೆಯಾಗಿದೆ. ಬೋಟ್‌ನಲ್ಲಿ ನಾಲ್ವರು ಮೀನುಗಾರರು ತೆರಳುತ್ತಿದ್ದ ವೇಳೆ ಅಳಿವೆಯಲ್ಲಿ ಅಪಾಯಕ್ಕೆ ಸಿಲುಕಿದ್ದು, ನೀರು ತುಂಬಿ ಮುಳುಗಡೆಯಾಗಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಪ್ರವೃತ್ತರಾಗಿ ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಘಟನೆಯಿಂದ ಬೋಟ್‌ಗೆ ಭಾರೀ ಹಾನಿಯಾಗಿದ್ದು, ಸುಮಾರು ₹15 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ತದಡಿ ಬಂದರು ಅಳಿವೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿರುವುದರಿಂದ ಬೋಟ್‌ಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹೂಳು ತೆರವುಗೊಳಿಸದ ಕಾರಣ ಬೋಟ್‌ಗಳು ಪದೇಪದೇ ಅಪಾಯಕ್ಕೆ ಸಿಲುಕುತ್ತಿವೆ ಎಂದು ಮೀನುಗಾರರು ದೂರಿದ್ದಾರೆ.

ಅಳಿವೆಯಲ್ಲಿನ ಹೂಳನ್ನು ಶೀಘ್ರ ತೆರವುಗೊಳಿಸಿ, ಮೀನುಗಾರಿಕಾ ಬೋಟ್‌ಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 

 

Please Share: