ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಹಳಗಾ ಗ್ರಾಮದ ಪ್ರಸಿದ್ಧ ಶ್ರೀ ಲಕ್ಷ್ಮಿ ನಾರಾಯಣ ಹಾಗೂ ಶ್ರೀ ದುರ್ಗಾದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ದಿನದ ಅಂಗವಾಗಿ ಲಕ್ಷ ಜಾಜಿಹೂಗಳಿಂದ ದೇವರಿಗೆ ವಿಶೇಷ ಅಲಂಕಾರ ಹಾಗೂ ಸತ್ಯನಾರಾಯಣ ಪೂಜೆ ಭಕ್ತಿಭಾವದಿಂದ ನೆರವೇರಿತು.
ಊರಿನ ಕಲ್ಯಾಣ ಹಾಗೂ ಸಮೃದ್ಧಿಗಾಗಿ ದೇವಾಲಯದ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡು ವಿಶೇಷ ಪೂಜೆಯಲ್ಲಿ ಭಾಗಿಯಾದರು. ಜಾಜಿಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ದೇವರ ದರ್ಶನ ಪಡೆದ ಭಕ್ತರು ಪೂಜಾ ಪ್ರಸಾದ ಸ್ವೀಕರಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಕುಮಾರ ನಾಯ್ಕ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದಿದ್ದು, ಮಂಡಳಿಯ ಪದಾಧಿಕಾರಿಗಳು ಹಾಗೂ ಊರಿನ ಮುಖಂಡರು ಪೂಜಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ದೇವಾಲಯದ ಅರ್ಚಕ ವರ್ಗದವರು ವಿಧಿವಿಧಾನಗಳೊಂದಿಗೆ ದೇವರ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕುಮಾರ ನಾಯ್ಕ, ಕಳೆದ ಎರಡು ವರ್ಷಗಳಿಂದ ದೇವಾಲಯದ ಅಭಿವೃದ್ಧಿ ಕಾರ್ಯಗಳ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ದೇವಾಲಯದ ಅಭಿವೃದ್ಧಿ ಹಾಗೂ ಧಾರ್ಮಿಕ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಶ್ರಾವಣ ಮಾಸದ ಕೊನೆಯ ದಿನ ನಡೆದ ವಿಶೇಷ ಪೂಜೆ ಹಾಗೂ ಜಾಜಿಹೂವಿನ ಅಲಂಕಾರ ಕಾರ್ಯಕ್ರಮವು ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ಮೂಡಿಸಿತು.



