ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ತಾಲೂಕಿನ ತದಡಿ ಬಂದರಿನ ಅಳಿವೆಯಲ್ಲಿ ಅಲೆಗಳ ಅಬ್ಬರಕ್ಕೆ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ನಡೆದಿದೆ.

Banner Ad

ತದಡಿಯ ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮೀ ಕೃಪ’ ಹೆಸರಿನ ಬೋಟ್ ಅಲೆಗಳ ರಭಸಕ್ಕೆ ಮುಳುಗಿದ್ದು, ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬೋಟ್ ಮುಳುಗಡೆಯಿಂದ ಸುಮಾರು ₹20 ಲಕ್ಷ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿತ್ತು. ಕಳೆದ ಒಂದು ವರ್ಷದಿಂದ ತದಡಿ ಅಳಿವೆಯಲ್ಲಿ ಪದೇಪದೇ ಬೋಟ್‌ಗಳು ಮುಳುಗುತ್ತಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.

ಈಗಾಗಲೇ ಹಲವು ಬೋಟ್‌ಗಳು ಅಳಿವೆಯಲ್ಲಿ ಹೂಳು ತುಂಬಿಕೊಂಡು ಪದೇಪದೇ ಮುಳುಗುತ್ತಿದ್ದು, ಮೀನುಗಾರರು ಆರ್ಥಿಕ ನಷ್ಟದ ಜೊತೆಗೆ ಜೀವಪಾಯದ ನಡುವೆಯೇ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೀನುಗಾರರು ದೂರಿದ್ದಾರೆ. ಅಳಿವೆಯಲ್ಲಿ ಹೂಳು ತೆರವುಗೊಳಿಸಿ, ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

 

Please Share: