ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ಜನ್ಮದಿನವನ್ನು ಆಗಸ್ಟ್ 18ರಂದು ಸರಳವಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಯಾವುದೇ ಅದ್ಧೂರಿ ಆಚರಣೆಗೆ ಮುಂದಾಗದೆ ಸರಳವಾಗಿ ಶುಭಾಶಯ ಕೋರಲು ಮನವಿ ಮಾಡಲಾಗಿದೆ.
ಜನ್ಮದಿನದಂದು ರೂಪಾಲಿ ಎಸ್. ನಾಯ್ಕ ಅವರು ಬೆಳಗ್ಗೆಯಿಂದ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳ ಬಳಿಕವೂ ಜನ್ಮದಿನವನ್ನು ಯಾವುದೇ ಆಡಂಬರವಿಲ್ಲದೆ ಸರಳವಾಗಿ ಆಚರಿಸಲು ಅವರು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೂಗುಚ್ಛ, ಹಾರ ಸೇರಿದಂತೆ ಯಾವುದೇ ಉಡುಗೊರೆಗಳನ್ನು ತರಬಾರದು ಎಂದು ಮನವಿ ಮಾಡಲಾಗಿದೆ. ಜನ್ಮದಿನದ ನೆಪದಲ್ಲಿ ಅನಗತ್ಯ ಖರ್ಚು ಮಾಡದೆ ಸರಳವಾಗಿ ಶುಭ ಹಾರೈಸುವಂತೆ ಕೋರಲಾಗಿದೆ.
ಆಗಸ್ಟ್ 18ರಂದು ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ರೂಪಾಲಿ ಎಸ್. ನಾಯ್ಕ ಅವರು ವಿವಿಧ ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವುದರಿಂದ ತಮ್ಮ ನಿವಾಸದಲ್ಲಿ ಲಭ್ಯವಿರುವುದಿಲ್ಲ. ಸಂಜೆ 5 ಗಂಟೆಯ ಬಳಿಕ ನಿವಾಸದಲ್ಲಿ ಸಾರ್ವಜನಿಕರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಭೇಟಿಯಾಗಿ ಶುಭಾಶಯ ಕೋರಬಹುದಾಗಿದೆ.
ಕಾರವಾರ–ಅಂಕೋಲಾ ಕ್ಷೇತ್ರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿ ಹಾಗೂ ಜನಪರ ವಿಚಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರೂಪಾಲಿ ನಾಯ್ಕ ಅವರು ಸದ್ಯ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳು ವ್ಯಕ್ತವಾಗುತ್ತಿವೆ.
ಜನ್ಮದಿನವನ್ನು ಸರಳವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶ ಹೊಂದಿದ್ದು, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಪ್ರೀತಿ, ಅಭಿಮಾನವೇ ತಮ್ಮ ಪಾಲಿನ ಅತ್ಯಂತ ದೊಡ್ಡ ಶುಭಾಶಯ ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಈ ಕುರಿತು ರೂಪಾಲಿ ನಾಯ್ಕ ಅವರ ಆಪ್ತ ಕಾರ್ಯದರ್ಶಿ ಗುರುಪ್ರಸಾದ ನಾಯ್ಕ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
