ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ಪತ್ನಿಯನ್ನು ಕರೆತರಲು ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಕೆಪಿಸಿ (ಕರ್ನಾಟಕ ವಿದ್ಯುತ್ ನಿಗಮ) ಉದ್ಯೋಗಿಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಉಸೋಡಾ ಗ್ರಾಮದ ಬಳಿ ಸೋಮವಾರ ಸಂಜೆ ನಡೆದಿದೆ.
ಗಣೇಶಗುಡಿಯಲ್ಲಿ ಕೆಪಿಸಿಯಲ್ಲಿ ಉದ್ಯೋಗಿಯಾಗಿದ್ದ ಮಲ್ಲಿಕಾರ್ಜುನ ರಾವ್(40) ಮೃತಪಟ್ಟವರು. ಅವರು ನ್ಯಾಯವಾದಿಯಾಗಿರುವ ತಮ್ಮ ಪತ್ನಿಯನ್ನು ಕರೆತರಲು ಗಣೇಶಗುಡಿಯಿಂದ ದಾಂಡೇಲಿಯತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಉಸೋಡಾ ಗ್ರಾಮದ ಬಳಿ ಸಾಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕೆಪಿಸಿ ನೌಕರರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ, ಗಾಯಗೊಂಡಿದ್ದ ಮಲ್ಲಿಕಾರ್ಜುನ ರಾವ್ ಅವರನ್ನು ದಾಂಡೇಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಮುಂದಾದರು. ತುರ್ತಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ, ವೈದ್ಯರು ಪರೀಕ್ಷಿಸಿದ ಬಳಿಕ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದರು.
ಪತ್ನಿಯನ್ನು ಕರೆತರಲು ತೆರಳಿದ್ದ ವೇಳೆ ಸಂಭವಿಸಿದ ಈ ದುರಂತದಲ್ಲಿ ಮಲ್ಲಿಕಾರ್ಜುನ ರಾವ್ ಅವರು ಜೀವ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ. ಘಟನೆಯಿಂದ ಕೆಪಿಸಿ ನೌಕರರು ಹಾಗೂ ಪರಿಚಯಸ್ಥರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಅಪಘಾತದ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಪ್ರಕರಣದ ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
