ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಸಿಲಿಂಡರ್ ಪೈಪ್ ಜೋಡಿಸುವ ವೇಳೆ ಉಂಟಾದ ತೊಂದರೆಯಿಂದ ಹೊಟೇಲ್‌ಗೆ ಬೆಂಕಿ ತಗುಲಿ ಕೆಲಕಾಲ ಧಗಧಗನೆ ಹೊತ್ತಿ ಉರಿದ ಘಟನೆ ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ನಗರದ ಗ್ರೀನ್‌ಸ್ಟ್ರೀಟ್ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.

Banner Ad

ಸ್ಥಳೀಯ ಕಾರವಾರ ತಾಜ್ ಹೊಟೇಲ್‌ನಲ್ಲಿ ಸಿಲಿಂಡರ್ ಪೈಪ್ ಜೋಡಿಸುವ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಹೊಟೇಲ್‌ನೊಳಗೆ ವ್ಯಾಪಿಸಿದೆ. ಘಟನೆಯ ವೇಳೆ ಹೊಟೇಲ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ದಳ ಆಗಮಿಸುವ ಮುನ್ನವೇ ಸ್ಥಳಕ್ಕೆ ಧಾವಿಸಿದ ಕಾರವಾರ ನಗರ ಠಾಣೆ ಪೊಲೀಸರು, ಪಿಎಸ್‌ಐ ಉದ್ದಪ್ಪ ಅವರ ನೇತೃತ್ವದಲ್ಲಿ ಜನರನ್ನು ನಿಯಂತ್ರಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ವಿದ್ಯುತ್ ಕಂಬದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮತ್ತಷ್ಟು ಅಪಾಯ ಸಂಭವಿಸುವುದನ್ನು ತಪ್ಪಿಸಿದರು.

ಪೊಲೀಸರು ಅಗ್ನಿಶಾಮಕ ಯಂತ್ರದ ಮೂಲಕ ಆರಂಭದಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯಿಂದ ಹೊಟೇಲ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆ ಇದ್ದು, ಪಕ್ಕದ ಹೊಟೇಲ್‌ಗಳಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸ್ಥಳದಲ್ಲಿ ಹಲವರು ಇದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 

 

 

Please Share: