ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕೈಗಾ ಎನ್‌ಪಿಸಿಐಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಅನ್ಯಾಯ ಮುಂದುವರಿದರೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಅರುಣ ಹರ್ಕಡೆ ಎಚ್ಚರಿಸಿದ್ದಾರೆ. 350ಕ್ಕೂ ಅಧಿಕ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಶೇ.75ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Banner Ad

ನೇಮಕಾತಿ ಪರೀಕ್ಷೆ ಬರೆದಿರುವ ಸ್ಥಳೀಯ ಅಭ್ಯರ್ಥಿಗಳಲ್ಲಿ ಈವರೆಗೆ ಒಬ್ಬರಿಗೂ ಸಂದರ್ಶನಕ್ಕೆ ಕರೆ ಬಂದಿಲ್ಲ ಎಂಬ ಮಾಹಿತಿ ಇದ್ದು, ಈ ಬಾರಿಯೂ ಹೊರ ರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಹರ್ಕಡೆ ಆರೋಪಿಸಿದ್ದಾರೆ. ಅಗತ್ಯ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಸ್ಥಳೀಯರನ್ನು ಕಡೆಗಣಿಸುವ ಮೂಲಕ ಎನ್‌ಪಿಸಿಐಎಲ್ ಮತ್ತೆ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ನೆಲ–ಜಲ ಬಳಸಿಕೊಂಡು, ಯೋಜನೆಯ ವಿಕಿರಣದ ಪರಿಣಾಮಗಳನ್ನು ಸ್ಥಳೀಯರು ಎದುರಿಸುವಾಗ ಉದ್ಯೋಗ ಮಾತ್ರ ಹೊರ ರಾಜ್ಯದವರಿಗೆ ನೀಡುವುದು ಖಂಡನೀಯ ಎಂದು ಅವರು ಹೇಳಿದ್ದಾರೆ. ಕೈಗಾದ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗಳಲ್ಲೂ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ಕೈಗಾ ಯೋಜನೆಯ ಭಾರೀ ವಾಹನಗಳ ಸಂಚಾರದಿಂದ ಹದಗೆಟ್ಟಿರುವ ಕಾರವಾರ–ಕೈಗಾ ರಸ್ತೆಯ ದುರಸ್ತಿಗೂ ತಕ್ಷಣ ಕ್ರಮ ಕೈಗೊಳ್ಳಬೇಕು. ಸ್ಥಳೀಯರ ಬೇಡಿಕೆಗಳನ್ನು ನಿರ್ಲಕ್ಷಿಸಿ ಉತ್ತರ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಿದರೆ ಹೋರಾಟ ಅನಿವಾರ್ಯ ಎಂದು ಅರುಣ ಹರ್ಕಡೆ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

 

Please Share: