ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ತಾಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಂಪಳಕಟ್ಟಾ–ಕಣಸಗಿರಿ ರಸ್ತೆ ಹಲವು ದಿನಗಳಿಂದ ಹದಗೆಟ್ಟು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗಟ್ಟಾಗಿ ಪಿಡಬ್ಲ್ಯೂಡಿ ಇಲಾಖೆಯ ಗಮನ ಸೆಳೆದಿದ್ದಾರೆ. ರಸ್ತೆಯ ದುರಸ್ತಿಗೆ ಆಗ್ರಹಿಸಿ ಮನವಿ ಸಲ್ಲಿಸಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಗಳವಾರದಿಂದ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.

ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳಿಂದಾಗಿ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿರುವುದಲ್ಲದೆ, ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಪಿಂಪಳಕಟ್ಟಾ–ಕಣಸಗಿರಿ ಮಾರ್ಗವು ಸ್ಥಳೀಯರ ಪ್ರಮುಖ ಸಂಚಾರ ರಸ್ತೆಯಾಗಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ವಿವಿಧ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಪ್ರತಿನಿತ್ಯ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟಿರುವುದರಿಂದ ಸಂಚಾರ ಇನ್ನಷ್ಟು ದುಸ್ತರವಾಗಿದೆ.

ಇದೀಗ ಗಣೇಶೋತ್ಸವ ಸೇರಿದಂತೆ ವಿವಿಧ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗುವ ಸಾಧ್ಯತೆಯಿದ್ದು, ಯಾವುದೇ ವಿಳಂಬವಿಲ್ಲದೆ ದುರಸ್ತಿ ಕೈಗೊಳ್ಳುವಂತೆ ಗ್ರಾಮಸ್ಥರು ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಪಿಡಬ್ಲ್ಯೂಡಿ ಎಇಇ ರಾಮು ಅರ್ಗೆಕರ ಅವರು ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ತೆರಳಿ ರಸ್ತೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು. ಮಂಗಳವಾರದಿಂದಲೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಯ ತಕ್ಷಣದ ಸ್ಪಂದನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಹಲವು ದಿನಗಳ ಸಮಸ್ಯೆಗೆ ಸ್ಪಂದಿಸಿ ಸ್ಥಳದಲ್ಲೇ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಆರಂಭಿಸುವ ಭರವಸೆ ನೀಡಿರುವುದು ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆ. ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು ಹಾಗೂ ರಸ್ತೆ ಮತ್ತೆ ಹದಗೆಡದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಈ ಸಂದರ್ಭದಲ್ಲಿ ಪ್ರಮುಖರಾದ ರಾಕೇಶ ಆಚಾರಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಸೂರಜ್ ದೇಸಾಯಿ, ಅಶೋಕ್ ರಾಣೆ, ಗುರು ಸಾವಂತ, ಅರುಣ್ ಮಹಾಲೆ ಸೇರಿದಂತೆ ಊರಿನ ನಾಗರಿಕರು ಉಪಸ್ಥಿತರಿದ್ದರು.
