ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ನಗರದ ವಿಟಿಯು ಕಾಲೇಜಿನ ಮೈದಾನದ ಗಟಾರಿನಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವು ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಗಟಾರಿನಲ್ಲಿ ಓಡಾಡುತ್ತಿದ್ದ ಹೆಬ್ಬಾವನ್ನು ಗಮನಿಸಿದ ವಿದ್ಯಾರ್ಥಿಗಳು ತಕ್ಷಣ ಕಾಲೇಜಿನ ಶಿಕ್ಷಕರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ತಜ್ಞ ರಾಜಾಕ್ ಶಾ ಸ್ಥಳಕ್ಕೆ ಧಾವಿಸಿ ರೆಸ್ಕ್ಯೂ ಕಾರ್ಯಾಚರಣೆ ಆರಂಭಿಸಿದರು.
ಸಾಕಷ್ಟು ಸಮಯ ಶ್ರಮಪಟ್ಟು ಹೆಬ್ಬಾವನ್ನು ಹಿಡಿಯುವ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಹೆಬ್ಬಾವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಂದರ್ಭ ಉರಗ ತಜ್ಞ ರಾಜಾಕ್ ಶಾ ಅವರಿಗೆ ಅಪಾಯದ ಪರಿಸ್ಥಿತಿ ಎದುರಾದರೂ, ಕ್ಷಣಾರ್ಧದಲ್ಲಿ ಅವರು ಜಸ್ಟ್ ಮಿಸ್ ಆಗಿ ಪಾರಾದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಜನರ ಜೀವ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉರಗ ತಜ್ಞ ರಾಜಾಕ್ ಶಾ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ರೆಸ್ಕ್ಯೂ ಕಾರ್ಯಾಚರಣೆಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ರಾಜಾಕ್ ಶಾ ಮತ್ತು ಅರಣ್ಯ ಇಲಾಖೆಯ ಸೇವೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
