ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಅಂಕೋಲ ತಾಲೂಕಿನ ಬೇಲೇಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ವಿಜಯಪುರ ಮೂಲದ ಸಿಕಂದರ್ ಚೌಧರಿ ಅವರು ಬೇಲೇಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಂಕೋಲ ತಾಲೂಕಿನ ವಂದಿಗೆಯಲ್ಲಿರುವ ಅವರ ಮನೆ ಮೇಲೆ ಐವರು ED ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

KPSC ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ, ಅಭ್ಯರ್ಥಿಗಳ OMR ಶೀಟ್ ತಿದ್ದುಪಡಿ ಮಾಡಿಸುವುದು ಹಾಗೂ ನೇಮಕಾತಿಗೆ ಹಣ ಪಡೆಯುವಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಸಿಕಂದರ್ ಚೌಧರಿ ಅವರ ಮೇಲಿದೆ. ಒಬ್ಬ ಅಭ್ಯರ್ಥಿಯಿಂದ ₹70ರಿಂದ ₹80 ಲಕ್ಷಕ್ಕೂ ಅಧಿಕ ಹಣ ಪಡೆದಿರುವ ಆರೋಪವೂ ಇದೆ.

ಈ ಪ್ರಕರಣವನ್ನು ಈ ಹಿಂದೆ ರಾಜ್ಯ ಸರ್ಕಾರ CID ತನಿಖೆಗೆ ವಹಿಸಿತ್ತು. ತನಿಖೆ ನಡೆಸಿದ್ದ CID ಅಧಿಕಾರಿಗಳು ಸಿಕಂದರ್ ಚೌಧರಿ ಅವರನ್ನು ಬಂಧಿಸಿದ್ದರು. ಬಳಿಕ ಅವರು ಬಿಡುಗಡೆಯಾಗಿದ್ದರು.

ಇದೀಗ ಪ್ರಕರಣದಲ್ಲಿನ ಹಣಕಾಸು ವ್ಯವಹಾರಗಳ ಕುರಿತು ED ತನಿಖೆ ನಡೆಸುತ್ತಿದ್ದು, ಅದರ ಭಾಗವಾಗಿ ವಂದಿಗೆಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ED ಅಧಿಕಾರಿಗಳು ವಶಕ್ಕೆ ಪಡೆದಿದ್ದು, ರಾಜ್ಯದ ವಿವಿಧೆಡೆ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಸಿಕಂದರ್ ಚೌಧರಿ ಕೆಲ ತಿಂಗಳ ಹಿಂದಷ್ಟೇ ಬೇಲೇಕೇರಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು.

 

 

 

Please Share: