ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ: ಪಟ್ಟಣದ ಬಂದರು ರಸ್ತೆಯ ಮಹಾಲಕ್ಷ್ಮೀ ಗ್ಯಾಸ್ ಗೋಡೌನ್ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದು, ಆತನಿಂದ ₹6 ಸಾವಿರ ಮೌಲ್ಯದ 116 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಗಾಂಜಾ ನೀಡಿದರೆಂದು ಆರೋಪಿಸಿ ಇಬ್ಬರ ಹೆಸರುಗಳನ್ನು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಕಾಸರಕೋಡ ಟೊಂಕಾ-2 ನಿವಾಸಿ, ಮೀನುಗಾರಿಕೆ ವೃತ್ತಿಯ ಮಹಮ್ಮದ್ ಅಲ್ತಾಫ್ ತಂದೆ ಸುಲೇಮಾನ ಬೆಟ್ಟುಳಿಕರ (30) ಬಂಧಿತ ಆರೋಪಿ. ಮಂಗಳವಾರರಂದು ಸಂಜೆ 6 ಗಂಟೆ ಸುಮಾರಿಗೆ ಬಂದರು ರಸ್ತೆಯ ಬದಿಯಲ್ಲಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಆರೋಪಿಯಿಂದ 116 ಗ್ರಾಂ ತೂಕದ, ಸುಮಾರು ₹6 ಸಾವಿರ ಮೌಲ್ಯದ ಗಾಂಜಾ ಇರುವ ಒಂದು ಪ್ಲಾಸ್ಟಿಕ್ ಕವರ್, ಗಾಂಜಾ ಪ್ಯಾಕಿಂಗ್‌ಗೆ ಬಳಸಿರುವ ಖಾಲಿ ಪ್ಲಾಸ್ಟಿಕ್ ಕವರ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ಅಲ್ತಾಫ್, ಕಾಸರಕೋಡ ನಿವಾಸಿ ತೌಹೀದ್ ತಂದೆ ಕಾಸಿಂ ಬುಡ್ಡೆ ಹಾಗೂ ಹೊನ್ನಾವರ ನಿವಾಸಿ ನಾಗರಾಜ ಅಚಾರಿ ಎಂಬುವವರು ಗಾಂಜಾ ಮಾರಾಟಕ್ಕಾಗಿ ತನಗೆ ನೀಡಿರುವುದಾಗಿ ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಹಮ್ಮದ್ ಅಲ್ತಾಫ್ ಸೇರಿದಂತೆ ತೌಹೀದ್ ಹಾಗೂ ನಾಗರಾಜ ಅಚಾರಿ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಹೊನ್ನಾವರ ಪೊಲೀಸ್ ಠಾಣೆಯ ಪಿಎಸ್‌ಐ (ತನಿಖೆ-1) ಅವರು ಸರ್ಕಾರದ ಪರವಾಗಿ ದೂರು ನೀಡಿದ್ದಾರೆ.

ಕಾರ್ಯಾಚರಣೆಯನ್ನು ಪಿಎಸ್‌ಐ ಮಂಜುನಾಥ ಹಾಗೂ ಕ್ರೈಂ ಪಿಎಸ್‌ಐ ಮಹಾಂತೇಶ ವಾಲ್ಮೀಕಿ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಪೊಲೀಸ್ ಸಿಬ್ಬಂದಿಗಳಾದ ರವಿ ನಾಯ್ಕ ಹಾಗೂ ಮನೋಜ್ ಪಾಲ್ಗೊಂಡಿದ್ದರು.

 

 

Please Share: