ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಆಶ್ರಯದಲ್ಲಿ ಮನೋವೈದ್ಯರ 36ನೇ ವಾರ್ಷಿಕ ರಾಜ್ಯಮಟ್ಟದ ಸಮ್ಮೇಳನ (KANCIPS) ಸೆಪ್ಟೆಂಬರ್ 4, 5 ಹಾಗೂ 6ರಂದು ಕಾರವಾರದಲ್ಲಿ ನಡೆಯಲಿದೆ ಎಂದು ಉತ್ತರ ಕನ್ನಡ ಮನೋವೈದ್ಯಕೀಯ ಸಂಘದ ಪದಾಧಿಕಾರಿಗಳು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘AI and Digital Psychiatry: Present and Future’ ಎಂಬುದು ಸಮ್ಮೇಳನದ ಪ್ರಮುಖ ವಿಷಯವಾಗಿದ್ದು, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಮನೋವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.
ಸಮ್ಮೇಳನವು ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಅನಿಲ್ ಎಂ. ನಾಗರಾಜ್, ಕಾರ್ಯದರ್ಶಿ ಡಾ. ನಾರಾಯಣ್ ಮುತಾಲಿಕ್ ಹಾಗೂ KANCIPS ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ. ರಂಗನಾಥ್ ಕುಲಕರ್ಣಿ ಅವರ ಮುತುವರ್ಜಿಯಲ್ಲಿ ನಡೆಯಲಿದೆ. ದೇಶದ ಖ್ಯಾತ ಮನೋವಿಜ್ಞಾನಿಗಳು ಹಾಗೂ ಮನೋವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಮೊದಲ ದಿನ ಸಾರ್ವಜನಿಕ ಮಾಹಿತಿ ಕಾರ್ಯಕ್ರಮವನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಹಾಗೂ ಶಿಕ್ಷಕರು ಇದರಲ್ಲಿ ಭಾಗವಹಿಸಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ವೈದ್ಯರು ತರಬೇತಿ ಹಾಗೂ ಮಾಹಿತಿ ನೀಡಲಿದ್ದಾರೆ. ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ‘ಟೆಲಿ-ಮಾನಸ್’ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ.
ಉಳಿದ ಸಮ್ಮೇಳನದ ಕಾರ್ಯಕ್ರಮಗಳು ಕಾರವಾರದ ಹೋಟೆಲ್ ಅಜ್ಜಿ ಓಷನ್‌ನಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಇದೇ ವೇಳೆ ಸಮ್ಮೇಳನದ ಅಂಗವಾಗಿ ಕಳೆದ ನಾಲ್ಕು ತಿಂಗಳಿನಿಂದ ಉತ್ತರ ಕನ್ನಡ ಮನೋವೈದ್ಯಕೀಯ ಸಂಘದಿಂದ ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಬ್ಬುವಾಡದ ಶಾಲೆಯಲ್ಲಿ ಡಾ. ವಿಜಯರಾಜ್ ಅವರು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದ್ದು, ಶಿರಾಲಿ ಹಾಗೂ ಭಟ್ಕಳದಲ್ಲಿ ಡಾ. ದೀಪಿಕಾ ಕಲಕೂರ ಅವರು ಮಕ್ಕಳ ಪೋಷಕರಿಗಾಗಿ ಕಾರ್ಯಕ್ರಮ ನಡೆಸಿದ್ದಾರೆ.
ಶಿರಸಿಯಲ್ಲಿ ಡಾ. ದಿಲ್‌ಪ್ರೀತ್ ಹಾಗೂ ಡಾ. ಆಶಯ್ ತೆಲಾಂಗ ಅವರು ಯೋಗ, ಮಾನಸಿಕ ಆರೋಗ್ಯ, ಒತ್ತಡ ನಿರ್ವಹಣೆ ಮತ್ತು ಆತ್ಮಹತ್ಯೆ ತಡೆ ಕುರಿತು ಮಾಹಿತಿ ನೀಡಿದ್ದಾರೆ. ಕಾರವಾರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಾ. ಅಕ್ಷಯ್ ಪಾಟಕ್ ಅವರು ಒತ್ತಡ ನಿರ್ವಹಣೆ ಕುರಿತು ಕಾರ್ಯಕ್ರಮ ನಡೆಸಿದ್ದು, ಜಿಲ್ಲೆಯ ವಿವಿಧೆಡೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘದ ಸದಸ್ಯರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉತ್ತರ ಕನ್ನಡ ಮನೋವೈದ್ಯಕೀಯ ಸಂಘದ ಸದಸ್ಯರಾದ ಡಾ. ವಿಜಯರಾಜ್, ಡಾ. ವಿಶಾಲ್ ವಿ., ಡಾ. ಅಕ್ಷಯ್ ಪಾಟಕ್ ಹಾಗೂ ಡಾ. ಸುಹಾನ್ ಉಪಸ್ಥಿತರಿದ್ದರು.


