ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕರಾಟೆ ಕ್ಷೇತ್ರದಲ್ಲಿ ಕಾರವಾರದ ಯುವ ಪ್ರತಿಭೆಯೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಯ ಹೆಮ್ಮೆಯಾಗಿದ್ದಾರೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇತ್ತೀಚಿಗೆ ನಡೆದ “ಮಂಗಳಾದೇವಿ ಸಿಂಗ್ ಸ್ಮಾರಕ 11ನೇ ಅಂತರರಾಷ್ಟ್ರೀಯ ಜೂನಿಯರ್ ಕರಾಟೆ ಚಾಂಪಿಯನ್‌ಶಿಪ್–2026”ರಲ್ಲಿ ಕಾರವಾರದ ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿ ಮಹೇಶ್ ಎಸ್. ಭೋವಿ ಎರಡು ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.

ಗುರುಕುಲ ಕಲಾ ಪ್ರಗತಿ ಕೇಂದ್ರ ಮಾರ್ಷಲ್ ಆರ್ಟ್ ಶೋಟೋಕಾನ್ ಕರಾಟೆ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಯಾಗಿರುವ ಮಹೇಶ್, ಕರಾಟೆ ಗುರು ಕ್ಯೋಷಿ ಪ್ರದೀಪ್ ಎಂ. ಬಾಂದೇಕರ್ ಅವರ ಮಾರ್ಗದರ್ಶನದಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮೂರು ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಮಹೇಶ್ ಆತ್ಮವಿಶ್ವಾಸದ ಪ್ರದರ್ಶನ ನೀಡಿ ಯಶಸ್ಸು ದಾಖಲಿಸಿದ್ದಾರೆ.

ಕುಮಿಟೆ ವಿಭಾಗದಲ್ಲಿ ಅತ್ಯುತ್ತಮ ಹೋರಾಟ ಕೌಶಲ್ಯ ಪ್ರದರ್ಶಿಸಿದ ಮಹೇಶ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಜಯಿಸಿದರು. ಇದೇ ವೇಳೆ ಕಟಾ ವಿಭಾಗದಲ್ಲೂ ಶಿಸ್ತುಬದ್ಧ ಹಾಗೂ ತಾಂತ್ರಿಕ ಪ್ರದರ್ಶನ ನೀಡಿದ ಅವರು ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಸಣ್ಣ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಮಹೇಶ್ ಅವರ ಗೆಲುವು ಕಾರವಾರ ತಾಲೂಕು, ಬಾಲಮಂದಿರ ಶಾಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ. ಕಠಿಣ ತರಬೇತಿ, ನಿರಂತರ ಅಭ್ಯಾಸ ಹಾಗೂ ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.

ಈ ಚಾಂಪಿಯನ್‌ಶಿಪ್ ಯುವ ಕರಾಟೆ ಆಟಗಾರರಿಗೆ ತಮ್ಮ ಪ್ರತಿಭೆ, ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ಸಮರ ಕಲೆಗಳ ಮೇಲಿನ ಸಮರ್ಪಣಾ ಮನೋಭಾವ ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು. ಮಹೇಶ್ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸಹ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ಸಾಧನೆ ಮಾಡುವ ವಿಶ್ವಾಸ ವ್ಯಕ್ತವಾಗಿದೆ.

 

Please Share: