ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಹಾರವಾಡ ಸಮೀಪದ ವಿಷ್ಣು ನಾಯ್ಕ್ ಅವರ ಮನೆಯಲ್ಲಿ ಬುಧವಾರ ಕೋಳಿ ಗೂಡಿಗೆ ನುಗ್ಗಿದ್ದ ಹೆಬ್ಬಾವು ಎರಡು ಕೋಳಿಗಳನ್ನು ನುಂಗಿ ಗೂಡಿನಲ್ಲೇ ಕುಳಿತಿದ್ದ ಘಟನೆ ಆತಂಕ ಸೃಷ್ಟಿಸಿತು.
ಕೋಳಿಗಳ ಅಸ್ವಾಭಾವಿಕ ಚಲನವಲನ ಗಮನಿಸಿದ ಮನೆಯವರು ಗೂಡಿನೊಳಗೆ ನೋಡಿದಾಗ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಕುಟುಂಬದವರು ತಕ್ಷಣ ಸ್ಥಳೀಯ ಉರಗ ಸಂರಕ್ಷಕ ಪ್ರಶಾಂತ್ ಕಳಸ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಕೂಡಲೇ ಸ್ಥಳಕ್ಕಾಗಮಿಸಿದ ಪ್ರಶಾಂತ್ ಕಳಸ, ಸ್ಥಳೀಯರ ಸಹಕಾರದೊಂದಿಗೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದರು. ಬಳಿಕ ಹೆಬ್ಬಾವನ್ನು ಅರಣ್ಯ ಪ್ರದೇಶದಲ್ಲಿ ಬಿಡುವ ಮೂಲಕ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು.
ಈ ವೇಳೆ ಹಾವುಗಳು ಕಂಡುಬಂದರೆ ಅವುಗಳಿಗೆ ಹಾನಿ ಮಾಡದೆ ಉರಗ ಸಂರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಪ್ರಶಾಂತ್ ಕಳಸ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
