ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಆನ್ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹53.19 ಲಕ್ಷ ವಂಚಿಸಿರುವ ಘಟನೆ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಬೆಳಕಿಗೆ ಬಂದಿದೆ.
ಅವರ್ಸಾ ಸಮೀಪದ ಮಠಾಕೇರಿ ನಿವಾಸಿ ಉದ್ಯಮಿ ಕಮಲಾಕ್ಷ ಆಪಾ ಭಟ್ (52) ವಂಚನೆಗೆ ಒಳಗಾದವರಾಗಿದ್ದಾರೆ.
ಪ್ರಕರಣದ ವಿವರದಂತೆ, ಏಪ್ರಿಲ್ 1ರಂದು ಫೇಸ್ಬುಕ್ ಬಳಸುತ್ತಿದ್ದ ವೇಳೆ “BXB Market” ಎಂಬ ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸಂದೇಶ ಕಮಲಾಕ್ಷ ಭಟ್ ಅವರಿಗೆ ಬಂದಿದೆ. ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಗೂಗಲ್ ಫಾರ್ಮ್ ತೆರೆಯಲ್ಪಟ್ಟಿದ್ದು, ಅದರಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ನೋಂದಣಿ ಮಾಡಿಕೊಂಡಿದ್ದರು.
ನಂತರ ನಿಖಿತಾ ಎಂಬ ಹೆಸರಿನ ಮಹಿಳೆ ಕರೆ ಮಾಡಿ ತಾನು BXB Market ಕಂಪನಿಯಿಂದ ಮಾತನಾಡುತ್ತಿರುವುದಾಗಿ ಹೇಳಿ ಟ್ರೇಡಿಂಗ್ ಖಾತೆ ತೆರೆದಿರುವುದಾಗಿ ತಿಳಿಸಿದ್ದಾಳೆ. ಬಳಿಕ ಟೆಲಿಗ್ರಾಂ ಮೂಲಕ ಸಂಪರ್ಕಿಸಿದ ಸೈಯದ್ ಎಂಬಾತ ತಾನು ಕಂಪನಿಯ ಅಕೌಂಟ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ಟ್ರೇಡಿಂಗ್ ಕುರಿತು ಮಾರ್ಗದರ್ಶನ ನೀಡಿದ್ದಾನೆ.
ಆತನ ಸೂಚನೆಯಂತೆ ಮೊದಲಿಗೆ ₹19,908 ಹೂಡಿಕೆ ಮಾಡಲಾಗಿದ್ದು, ಟ್ರೇಡಿಂಗ್ ಆ್ಯಪ್ನಲ್ಲಿ ಹಣ ಹಾಗೂ ಲಾಭಾಂಶ ಹೆಚ್ಚುತ್ತಿರುವಂತೆ ತೋರಿಸಲಾಗಿತ್ತು. ನಂತರ ಅಶುತೋಶ್ ಎಂಬ ಮತ್ತೊಬ್ಬ ವ್ಯಕ್ತಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಾನೆ.
ಇದರಿಂದ ಪ್ರೇರಿತರಾದ ಕಮಲಾಕ್ಷ ಭಟ್ ಅವರು ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಏಪ್ರಿಲ್ 3ರಿಂದ ಮೇ 18ರವರೆಗೆ ಹಂತ ಹಂತವಾಗಿ ಒಟ್ಟು ₹53,19,908 ಹಣ ವರ್ಗಾವಣೆ ಮಾಡಿದ್ದಾರೆ.
ಆದರೆ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶ ಯಾವುದೂ ಮರಳಿ ದೊರೆಯದೇ ಇದ್ದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
