ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ, ಜು. 16: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿಕೊಂಡು ಬಂದ ಯುವಕ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಕಚೇರಿ ಸಮೀಪ ಗುರುವಾರ ಬೆಳಿಗ್ಗೆ ನಡೆದಿದೆ.

ಗಾಯಗೊಂಡವರನ್ನು ಶಿರವಾಡ ನಿವಾಸಿ ಹಾಗೂ ಗೂಡoಗಡಿ ವ್ಯಾಪಾರಿ ಮಹಿಳೆ ಮುಕ್ತದುಬಿ ದಾವುಲಸಾಬ ಚೋಪದಾರ (40) ಎಂದು ಗುರುತಿಸಲಾಗಿದೆ. ಧಾರವಾಡ ಮೂಲದ, ಸದ್ಯ ಹಬ್ಬುವಾಡ ನಿವಾಸಿ ಹಾಗೂ ಕೂಲಿ ಕಾರ್ಮಿಕ ಸುರೇಂದ್ರ ಮುಕೇಶ ಲಮಾಣಿ (19) ಬೈಕ್ ಚಲಾಯಿಸುತ್ತಿದ್ದ ವೇಳೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸ ಮೂಲಗಳು ತಿಳಿಸಿವೆ.

ಡಿಕ್ಕಿಯ ರಭಸಕ್ಕೆ ಮಹಿಳೆ ರಸ್ತೆಗೆ ಬಿದ್ದು ತಲೆಗೆ ಹಾಗೂ ಎಡಗಾಲಿನ ಮೊಣಕಾಲಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ ಸುರೇಂದ್ರನಿಗೂ ಕಾಲಿಗೆ ಗಾಯವಾಗಿದ್ದು, ಇಬ್ಬರನ್ನೂ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಗೆ ಸ್ಥಳೀಯರು ನೆರವಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್ ಗಾಯಾಳುವನ್ನು ಮೇಲಕ್ಕೆತ್ತಿ ಪ್ರಾಥಮಿಕ ಆರೈಕೆ ಮಾಡಿದರು. ಬಳಿಕ ಆಂಬುಲೆನ್ಸ್‌ಗೆ ಕರೆ ಮಾಡಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.

ಘಟನಾ ಸ್ಥಳಕ್ಕೆ ಕಾರವಾರ ನಗರ ಠಾಣೆಯ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬೈಕ್ ಸವಾರ ಸುರೇಂದ್ರ ಮುಕೇಶ ಲಮಾಣಿ ವಿರುದ್ಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಹಾಗೂ ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

Please Share: