ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: “ಪರೀಕ್ಷೆ ಬೇಡ, ಟ್ರೈನಿಂಗ್ ಬೇಡ… ಹಣ ಕೊಡಿ, ಪಿಎಸ್ಐ ಕುರ್ಚಿ ನಿಮ್ಮದೇ!” — ಇಂಥ ‘ಸೀಕ್ರೆಟ್ ಆಫರ್’ಗೆ ನಂಬಿಕೆ ಇಟ್ಟ ನಿವೃತ್ತ ಸೈನಿಕನೊಬ್ಬ ಕೊನೆಗೆ ಲಕ್ಷಾಂತರ ಹಣ ಕಳೆದುಕೊಂಡು ಪೊಲೀಸ್ ಠಾಣೆ ಬಾಗಿಲು ತಟ್ಟಿದ ಘಟನೆ ಹಳಿಯಾಳದಲ್ಲಿ ಬೆಳಕಿಗೆ ಬಂದಿದೆ.
ದುರ್ಗಾನಗರ ನಿವಾಸಿ ವಿಷ್ಣು ಮಹಾಬಲೇಶ್ವರ ಶಿರೋಡ್ಕರ್ ಅವರು ನೀಡಿದ ದೂರಿನ ಮೇರೆಗೆ, ಕೆಎಚ್ಬಿ ಕಾಲೋನಿಯ ಸಣ್ಣನಿಂಗಪ್ಪ ಅರ್ಜುನ್ ಶೆಟ್ಟಣ್ಣನವರ್ ಹಾಗೂ ಅವರ ಪುತ್ರರಾದ ಕಿರಣ ಶೆಟ್ಟಣ್ಣನವರ್ ಮತ್ತು ಮಂಜುನಾಥ ಶೆಟ್ಟಣ್ಣನವರ್ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, 2023ರಲ್ಲಿ ಆರೋಪಿಗಳು “ಪಿಎಸ್ಐ ಹುದ್ದೆ ಪಕ್ಕಾ ಮಾಡಿಸುತ್ತೇವೆ” ಎಂದು ಭರವಸೆ ನೀಡಿ, “ಹಣ ಕೊಟ್ಟರೆ ಕೆಲಸ ಗ್ಯಾರಂಟಿ” ಎಂದು ನಂಬಿಸಿದ್ದಾರಂತೆ. ಸರ್ಕಾರಿ ಉದ್ಯೋಗಕ್ಕೂ ಈಗ “ಪ್ರೀಮಿಯಂ ಪ್ಯಾಕೇಜ್” ಬಂದಿದೆಯೇನೋ ಎಂದು ಭಾವಿಸಿದ ಶಿರೋಡ್ಕರ್ ಅವರು ಹಂತ ಹಂತವಾಗಿ ಹಣ ನೀಡಿದ್ದಾರೆ ಎನ್ನಲಾಗಿದೆ.
2023ರ ಫೆಬ್ರವರಿ 6ರಿಂದ 2026ರ ಏಪ್ರಿಲ್ 24ರವರೆಗೆ ಆರೋಪಿಗಳು ಸೇರಿ ₹18 ಲಕ್ಷ ನಗದು ಹಾಗೂ ₹90 ಸಾವಿರವನ್ನು ಫೋನ್ಪೇ ಮೂಲಕ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ “ಪಿಎಸ್ಐ ಪೋಸ್ಟಿಂಗ್” ಮಾತ್ರ ಫೈಲ್ನಲ್ಲೇ ಸಿಲುಕಿದಂತಾಗಿದೆ!
ಕೆಲಸವೂ ಇಲ್ಲ, ಹಣವೂ ಇಲ್ಲ ಎನ್ನುವ ಪರಿಸ್ಥಿತಿ ಬಂದಾಗ ಶಿರೋಡ್ಕರ್ ಅವರು ಹಣ ವಾಪಸ್ ಕೇಳಿದ್ದಾರಂತೆ. ಆಗ ಆರೋಪಿಗಳು ₹7.08 ಲಕ್ಷ ಮಾತ್ರ ಹಿಂದಿರುಗಿಸಿ ಉಳಿದ ಹಣಕ್ಕೆ “ಸರ್ವರ್ ಡೌನ್” ಮೋಡ್ ಹಾಕಿದರಂತೆ ಎಂಬ ಮಾತು ಸ್ಥಳೀಯರಲ್ಲಿ ಕೇಳಿಬರುತ್ತಿದೆ.
ಉಳಿದ ಹಣ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ದಾಖಲಾಗಿದೆ. “ಪಿಎಸ್ಐ ಆಗುವ ಮುಂಚೆಯೇ ಪೊಲೀಸ್ ಠಾಣೆ ಅನುಭವ ಸಿಕ್ಕಿದೆ” ಎಂದು ಜನರು ವ್ಯಂಗ್ಯ ಮಾಡುತ್ತಿದ್ದಾರೆ.
ಈ ಕುರಿತು ಹಳಿಯಾಳ ಪೊಲೀಸರು ವಂಚನೆ, ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
