ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ವಿದೇಶದಿಂದ ಊರಿಗೆ ಬಂದಿದ್ದ ಯುವಕನೊಬ್ಬನ ಮದುವೆ ಸಂಭ್ರಮ ಕ್ಷಣಾರ್ಧದಲ್ಲಿ ಆತಂಕಕ್ಕೆ ತಿರುಗಿ, ಬಳಿಕ ಮೂರುವರೆ ತಿಂಗಳ ಕಾಲ ಪೊಲೀಸರಿಗೂ ಸವಾಲಾಗಿ ಪರಿಣಮಿಸಿದ್ದ ನಿಗೂಢ ನಾಪತ್ತೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಮದುವೆ ಸಿದ್ಧತೆಗಾಗಿ ಚಿನ್ನ ಖರೀದಿಸಲು ಬಂದ ಯುವಕ, ಮಸೀದಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟವನು ಮತ್ತೆ ಮನೆ ತಲುಪಲೇ ಇಲ್ಲ!

Banner Ad

ಕುಮಟಾ ಮೂಲದ, ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜಾಕೀರ ಬೇಗ (33) ಎಂಬ ಯುವಕನೇ ನಾಪತ್ತೆಯಾಗಿದ್ದ ವ್ಯಕ್ತಿ ಎಂಬುದು ಇದೀಗ ದೃಢಪಟ್ಟಿದೆ.

ನಾಪತ್ತೆಯ ದಿನದ ಕಥೆ

ದಿನಾಂಕ 18-10-2025ರಂದು ಜಾಕೀರ ಬೇಗ ತನ್ನ ಮದುವೆಗಾಗಿ ಚಿನ್ನಾಭರಣ ಖರೀದಿಸುವ ಉದ್ದೇಶದಿಂದ ಅತ್ತಿಗೆ ಹಾಗೂ ಸಂಬಂಧಿಕರೊಂದಿಗೆ ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದರು. ಚಿನ್ನ ಖರೀದಿಯ ಮಧ್ಯೆ, ಮಧ್ಯಾಹ್ನ ಸಮಯದಲ್ಲಿ ಭಟ್ಕಳದ ನೂರಪಳ್ಳಿ ಮಸೀದಿಗೆ ನಮಾಜ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ ಜಾಕೀರ, ಮಧ್ಯಾಹ್ನ 1:15ರ ಸುಮಾರಿಗೆ ಮಸೀದಿಯಿಂದ ಹೊರಬಂದ ಬಳಿಕ ದಿಢೀರ್ ಮಾಯವಾಗಿದ್ದರು.

ಮಸೀದಿಯಿಂದ ಹೊರಬಂದ ಜಾಕೀರ, ಸಂಬಂಧಿಕರ ಮನೆಗೂ ಹೋಗದೆ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪೂರ್ಣವಾಗಿ ಕಣ್ಮರೆಯಾಗಿದ್ದಾನೆ. ಮದುವೆ ಸಿದ್ಧತೆ ಜೋರಾಗಿದ್ದ ಕುಟುಂಬಸ್ಥರು ಅಚಾನಕ್ ಈ ನಾಪತ್ತೆಯಿಂದ ಬೆಚ್ಚಿಬಿದ್ದು, ದಿನಗಟ್ಟಲೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಕಾರಣ ಭಟ್ಕಳ ಶಹರ ಪೊಲೀಸರ ಮೊರೆ ಹೋಗಿದ್ದರು.

ಪೊಲೀಸರ ತನಿಖೆಗೆ ತಿರುವು ನೀಡಿದ ಮೊಬೈಲ್

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭಟ್ಕಳ ಶಹರ ಪೊಲೀಸರು, ತಾಂತ್ರಿಕ ತನಿಖೆ ಆರಂಭಿಸಿದರು. ಮೊಬೈಲ್ ಕಾಲ್ ಡೀಟೈಲ್ಸ್ ಹಾಗೂ ಸಿಗ್ನಲ್ ಟ್ರ್ಯಾಕಿಂಗ್ ಮೂಲಕ ನಡೆಸಿದ ತನಿಖೆಯಲ್ಲಿ ಅಚ್ಚರಿಯ ಸಂಗತಿ ಬೆಳಕಿಗೆ ಬಂತು. ಜಾಕೀರ ತನ್ನ ಬಳಿಯಿದ್ದ ಮೊಬೈಲ್ ಫೋನ್ ಅನ್ನು ಮಾರಾಟ ಮಾಡಿರುವುದು ಪತ್ತೆಯಾಯಿತು.

ಈ ಮಹತ್ವದ ಸುಳಿವನ್ನು ಆಧಾರ ಮಾಡಿಕೊಂಡು, ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ ಹಾಗೂ ಪಿಎಸ್‌ಐ ನವೀನ ನಾಯ್ಕ ನೇತೃತ್ವದ ವಿಶೇಷ ತಂಡ ಮುಂದಿನ ತನಿಖೆಗೆ ಮುಂದಾಯಿತು.

ತುಮಕೂರಿನಲ್ಲಿ ಬಯಲಾದ ಸತ್ಯ

ಮೊಬೈಲ್ ಮಾರಾಟದ ಜಾಡು ಹಿಡಿದು, ಪೊಲೀಸರು ನೇರವಾಗಿ ತುಮಕೂರಿಗೆ ತೆರಳಿದರು. ಅಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ, ಆತನೇ ನಾಪತ್ತೆಯಾಗಿದ್ದ ಜಾಕೀರ ಬೇಗ ಎಂಬುದು ಖಚಿತವಾಯಿತು.

ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಜಾಕೀರ, ಮದುವೆಯಾಗಲು ಅಗತ್ಯವಿರುವ ಹಣದ ಕೊರತೆ ಹಾಗೂ ಮನೆಯವರ ಮುಂದೆ ಆಗುವ ಮುಜುಗರದಿಂದ ಮನಸ್ಸಿಗೆ ಬೇಸರಗೊಂಡು, ಯಾವುದೇ ಮಾಹಿತಿ ನೀಡದೆ ಊರಿನಿಂದ ದೂರವಾಗಿದ್ದಾನೆ. ದುಡಿದು ಹಣ ಸಂಪಾದಿಸಬೇಕು ಎಂಬ ಉದ್ದೇಶದಿಂದ ತುಮಕೂರಿನ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ ಎಂಬ ಸಂಗತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ

ಈ ಕ್ಲಿಷ್ಟಕರ ಹಾಗೂ ಭಾವನಾತ್ಮಕವಾಗಿ ಸೂಕ್ಷ್ಮವಾಗಿದ್ದ ನಾಪತ್ತೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಭಟ್ಕಳ ಶಹರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಎಸ್ಪಿ ದೀಪನ್ ಎಂ.ಎನ್ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಪಿಎಸ್‌ಐ ನವೀನ ನಾಯ್ಕ್, ಸಿಬ್ಬಂದಿಗಳಾದ ರವಿ ಪಟಗಾರ, ದೇವು ನಾಯ್ಕ್, ಕಾಶಿನಾಥ, ಹಾಗೂ ಟೆಕ್ನಿಕಲ್ ಸೆಲ್‌ನ ಉದಯ್ ಮತ್ತು ಬಬನ್ ಕದಂ ಅವರನ್ನು ಒಳಗೊಂಡ ತಂಡ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಪ್ರಕರಣವನ್ನು ಬಗೆಹರಿಸಿದೆ.

ಮದುವೆ ಸಂಭ್ರಮದಿಂದ ಆರಂಭವಾದ ಕಥೆ, ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ ಮತ್ತು ನಾಪತ್ತೆಯ ರಹಸ್ಯವರೆಗೆ ಸಾಗಿದ ಈ ಪ್ರಕರಣ, ಸಮಾಜದಲ್ಲಿ ಯುವಕರ ಮೇಲೆ ಬೀಳುತ್ತಿರುವ ಅಘಾತದ ಮತ್ತೊಂದು ಮುಖವನ್ನೇ ತೋರಿಸಿದೆ.

 

Please Share: