ಕರಾವಳಿ ವಾಯ್ಸ್ ನ್ಯೂಸ್
ಕಾರವಾರ, ಜೂನ್ 1: ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರವಾರ ಶಹರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರವಾರ ಶಹರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 115/2018ರಡಿ ಭಾರತೀಯ ದಂಡ ಸಂಹಿತೆಯ 379, 411, 201, 34 ಹಾಗೂ 22 ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯದ ಸಿಸಿ ನಂ.159/2023 ಹಾಗೂ ಎಲ್‌ಪಿಸಿ ನಂ.43/2024ರಡಿ ಆರೋಪಿತನ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ಆರೋಪಿತನಾದ ನಿಯಾಜ್ @ ಮೋಟು ದಸ್ತಗಿರ್ ಶೇಖ್, ಶಿರಸಿ ನಗರದ ನೆಹರುನಗರದ ಕೋಟೆಕೆರೆ ಸಮೀಪ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಆರೋಪಿತನ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲದೇ ರಾಜ್ಯದ ವಿವಿಧ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿತನ ಪತ್ತೆಗಾಗಿ ಕಾರವಾರ ಶಹರ ಪೊಲೀಸರು ವಿಶೇಷ ತಂಡ ರಚಿಸಿ, ಖಚಿತ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ರವಿವಾರ ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆಯಲ್ಲಿ ಕಾರವಾರ ಶಹರ ಪೊಲೀಸ್ ಠಾಣೆಯ ಸಿಹೆಚಸಿ ಗಳಾದ ಹಸನ್ ಕುಟ್ಟಿ, ಸಚಿನ್ ನಾಯ್ಕ, ಮಾದೇವ್ ಸಂಗಾಪುರ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಎಆರ್‌ಎಸ್‌ಐ ಬಬನ್ ಕದಂ ಮತ್ತು ಸಿಹೆಚಸಿ ಉದಯ್ ವಿ. ಗುನಗಾ ಭಾಗವಹಿಸಿದ್ದರು.
ಆರೋಪಿತನ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
