ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳ ಜನಪ್ರಿಯತೆಗಾಗಿ ಸಮಾಜದ ಭಾಷೆ, ಸಂಸ್ಕೃತಿ ಮತ್ತು ಭಾವನೆಗಳೊಂದಿಗೆ ಆಟವಾಡುವ ಪ್ರವೃತ್ತಿಗೆ ಅಂಕೋಲಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕ್ಷತ್ರಿಯ ಕೋಮಾರಪಂತ ಸಮಾಜದ ವಿಶಿಷ್ಟ ಆಡುಭಾಷೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ರೀಲ್ಸ್ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಯುವತಿಯೊಬ್ಬರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಬೇರೆ ಸಮುದಾಯಕ್ಕೆ ಸೇರಿದ ಯುವತಿ, ಕೋಮಾರಪಂತ ಸಮಾಜದ ಆಡುಭಾಷೆಯನ್ನು ಹಾಸ್ಯದ ವಸ್ತುವನ್ನಾಗಿ ಮಾಡಿ ರೀಲ್ಸ್ ನಿರ್ಮಿಸಿದ್ದು, ಹೆಚ್ಚು ಲೈಕ್ಸ್, ಶೇರ್ ಹಾಗೂ ಫಾಲೋವರ್ಸ್ ಗಳಿಸುವ ಉದ್ದೇಶದಿಂದ ಸಮಾಜದ ಭಾಷೆಯನ್ನೇ ಅಣಕಿಸಿದ್ದಾರೆ ಎನ್ನಲಾಗಿದೆ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಮಾಜದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾಷೆ ಮತ್ತು ಸಂಸ್ಕೃತಿಗೆ ಅವಮಾನ ಎಸಗಿರುವ ಆರೋಪ ಮಾಡಿದ್ದಾರೆ.
ಇನ್ನಷ್ಟು ಆಕ್ರೋಶಕ್ಕೆ ಕಾರಣವಾದ ಸಂಗತಿಯೆಂದರೆ, ರೀಲ್ಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ ಸಮಾಜದ ಯುವಕರಿಗೆ ಸಾಮಾಜಿಕ ಜಾಲತಾಣದಲ್ಲೇ ಅಸಭ್ಯ ಹಾಗೂ ಅವಹೇಳನಕಾರಿ ಪದಗಳಿಂದ ಪ್ರತಿಕ್ರಿಯೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ವಿವಾದ ಮತ್ತಷ್ಟು ತೀವ್ರಗೊಂಡಿದೆ.
ಪ್ರಕರಣದ ವಿರುದ್ಧ ಸಮಾಜದ ಪ್ರಮುಖ ಸಂಜಯ ನಾಯ್ಕ ಅವರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು ಹಾಗೂ ಯುವಕರು ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ಸಲ್ಲಿಸಿ, ಸಮಾಜದ ಗೌರವಕ್ಕೆ ಧಕ್ಕೆ ತಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ವಿಜಯಕುಮಾರ ನಾಯ್ಕ, ಗಣಪತಿ ನಾಯ್ಕ, ಚಂದ್ರಕಾಂತ ನಾಯ್ಕ, ಮಾರುತಿ ನಾಯ್ಕ, ವಿನೋದ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ ದೂರು ಸ್ವೀಕರಿಸಿ, ಪ್ರಕರಣವನ್ನು ಪರಿಶೀಲಿಸಿ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಂಜಯ ನಾಯ್ಕ ಮಾತನಾಡಿ, “ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆಗಾಗಿ ಯಾವುದೇ ಸಮುದಾಯದ ಭಾಷೆ, ಸಂಸ್ಕೃತಿ ಮತ್ತು ಗೌರವವನ್ನು ಹೀಯಾಳಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ. ಇಂತಹ ಕೃತ್ಯಗಳನ್ನು ಸಹಿಸದೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಪ್ರಕರಣ ಇದೀಗ ಪೊಲೀಸ್ ತನಿಖೆಯ ಹಂತದಲ್ಲಿದ್ದು, ಸಮಾಜದ ಭಾಷೆ ಮತ್ತು ಸಂಸ್ಕೃತಿಯನ್ನು ಅವಹೇಳನ ಮಾಡಿದ ಆರೋಪಕ್ಕೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರತ್ತ ಸಾರ್ವಜನಿಕರ ಗಮನ ನೆಟ್ಟಿದೆ.
