ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ರಾಜ್ಯದಲ್ಲಿ ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವುದು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ವ್ಯಾಪಕ ಮಟ್ಟದ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದೆ. ಈ ಕ್ರಮದ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಹತ್ವದ ಆಡಳಿತಾತ್ಮಕ ಬದಲಾವಣೆಗಳು ನಡೆದಿವೆ.

ಸರ್ಕಾರದ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಎಂ.ಎಸ್. ಆಶಾ ಅವರನ್ನು ಬಳ್ಳಾರಿ ಜಿಲ್ಲೆಯ ಜಂಟಿ ನಿರ್ದೇಶಕರ (ಜೆಡಿ) ಸ್ಕ್ವಾಡ್‌ಗೆ ವರ್ಗಾವಣೆ ಮಾಡಲಾಗಿದೆ.

ಅದೇ ರೀತಿ ಜಿಲ್ಲೆಯ ಭೂವಿಜ್ಞಾನಿಗಳಾದ ಜಯರಾಮ್ ಗಣಪತಿ ನಾಯಕ್ ಅವರನ್ನು ಬಳ್ಳಾರಿಗೆ, ಮಂಜುನಾಥ ದೇವಾಡಿಗ ಅವರನ್ನು ಕೋಲಾರಕ್ಕೆ, ಹರೀಶ್ ಕೆ.ಎಸ್. ಅವರನ್ನು ತುಮಕೂರಿಗೆ ಹಾಗೂ ಸುಭಾಷ್ ಚಂದ್ರ ಎಸ್. ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿಗೆ ವರ್ಗಾವಣೆ ಮಾಡಲಾಗಿದೆ.

ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕೃಷ್ಣಮೂರ್ತಿ ಬಿ.ಎನ್., ಅಬ್ದುಲ್ ಹಫೀಜ್ ಶೇಖ್, ರೂಪ ಸಿ.ಎಚ್. ಹಾಗೂ ಸುಷ್ಮಾ ಶಶಿ ಅವರನ್ನು ನೂತನವಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಗಣಿ ಇಲಾಖೆಯಲ್ಲಿ ನಡೆದಿರುವ ಈ ಬೃಹತ್ ವರ್ಗಾವಣೆಯನ್ನು ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಹಾಗೂ ಅನಧಿಕೃತ ಗಣಿಗಾರಿಕೆ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಗಾ ವಹಿಸುವ ಉದ್ದೇಶದಿಂದ ಕೈಗೊಂಡ ಮಹತ್ವದ ಕ್ರಮವೆಂದು ಪರಿಗಣಿಸಲಾಗಿದೆ.

 

Please Share: