ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ತಾಲೂಕಿನ ನಂದಿಗಟ್ಟಿ ಗ್ರಾಮದಲ್ಲಿ ಜಿಂಕೆ ಮಾಂಸ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಅನವಟ್ಟಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 17ರಂದು ಖಚಿತ ಮಾಹಿತಿಯ ಆಧಾರದಲ್ಲಿ ನಂದಿಗಟ್ಟಿ ಗ್ರಾಮದ ಮನೆಯೊಂದರ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸಿ, ಸುಮಾರು 9 ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿತ್ತು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ರಮೇಶ್ ಚವ್ಹಾಣನನ್ನು ಬಂಧಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದ ವಸಂತ ಕೊರವರ ಸ್ಥಳದಿಂದ ಪರಾರಿಯಾಗಿದ್ದ.
ಆರೋಪಿಯ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ, ಆತ ಅನವಟ್ಟಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಕಲೆಹಾಕಿ, ಸೋಮವಾರ ದಾಳಿ ನಡೆಸಿ ಬಂಧಿಸಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಅಜೀಜ್ ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಈರೇಶ್ ಕಬ್ಬಿ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ನೇತೃತ್ವದ ತಂಡ ಮತ್ತು ಅನವಟ್ಟಿ ವಲಯ ಅರಣ್ಯಾಧಿಕಾರಿಗಳ ಸಿಬ್ಬಂದಿಯ ಸಹಕಾರದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಅರಣ್ಯ ಇಲಾಖೆ ಹೆಚ್ಚಿನ ತನಿಖೆ ಮುಂದುವರಿಸಿದೆ.
