ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಪೊಲೀಸ್ ಠಾಣೆಯ ಪ್ರಮುಖ ಹುದ್ದೆಯ ಪೋಸ್ಟಿಂಗ್‌ಗೆ ಹಣದ ವ್ಯವಹಾರ ಹಾಗೂ ಠಾಣೆಯ ಮಾಸಿಕ ‘ಹಪ್ತಾ’ ಕುರಿತು ಮಾತುಕತೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಯಾಳದ ಮೂವರು ಪೊಲೀಸ್ ಉಪನಿರೀಕ್ಷಕರನ್ನು (ಪಿಎಸ್ಸೆ) ಅಮಾನತು ಮಾಡಲಾಗಿದೆ.

ಹಳಿಯಾಳ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಸೆ ಕಿರಣ್ ಪಾಟೀಲ್, ಅಪರಾಧ ವಿಭಾಗದ ಪಿಎಸ್ಸೆ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್ಸೆಯಾಗಿ ಕಾರ್ಯನಿರ್ವಹಿಸಿದ್ದ ವಿನೋದ್ ರೆಡ್ಡಿ ಅಮಾನತುಗೊಂಡ ಅಧಿಕಾರಿಗಳು ಎಂದು ತಿಳಿದುಬಂದಿದೆ.

ಮೂವರು ಅಧಿಕಾರಿಗಳ ನಡುವಿನ ಮಾತುಕತೆ ಎನ್ನಲಾದ ಆಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಠಾಣೆಯ ಪ್ರಮುಖ ಹುದ್ದೆಯ ಪೋಸ್ಟಿಂಗ್‌ಗೆ ಹಣದ ವ್ಯವಹಾರ, ಠಾಣೆಯಿಂದ ಮಾಸಿಕವಾಗಿ ಹಣ ನೀಡುವಿಕೆ ಹಾಗೂ ಮೇಲಾಧಿಕಾರಿಗಳಿಗೆ ಹಣ ಕೊಡುವ ಕುರಿತು ಸಂಭಾಷಣೆ ನಡೆದಿದೆ ಎನ್ನುವ ಆರೋಪಗಳು ಆಡಿಯೋದಲ್ಲಿದ್ದವು.

ಈ ಆಡಿಯೋವನ್ನು ಜೆಡಿಎಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿಯೂ ಹಂಚಿಕೊಂಡು, ‘ಪೋಸ್ಟಿಂಗ್‌ಗಾಗಿ ಖಾಕಿ ತೊಟ್ಟ ಅಧಿಕಾರಿಗಳೇ ಡೀಲ್’ ಎಂದು ಆರೋಪಿಸಿತ್ತು. ಇದರಿಂದ ಪ್ರಕರಣ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿತ್ತು.
ತನಿಖೆ ಬಳಿಕ ಅಮಾನತು
ವೈರಲ್ ಆಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ತನಿಖೆಗೆ ಆದೇಶಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ತನಿಖೆಯ ಆಧಾರದ ಮೇಲೆ ಇದೀಗ ಮೂವರು ಪಿಎಸ್ಸೆಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಆಡಿಯೋದಲ್ಲಿನ ಧ್ವನಿಗಳು ಯಾರದ್ದು, ಸಂಭಾಷಣೆ ನಡೆದಿರುವ ನಿಖರ ಸಂದರ್ಭವೇನು ಹಾಗೂ ಆಡಿಯೋದಲ್ಲಿ ಕೇಳಿಬರುವ ಆರೋಪಗಳಿಗೆ ವಾಸ್ತವಾಂಶವಿದೆಯೇ ಎಂಬುದರ ಕುರಿತು ತನಿಖೆಯಿಂದ ಇನ್ನಷ್ಟು ಸ್ಪಷ್ಟತೆ ದೊರೆಯಬೇಕಿದೆ.
ಸೋರಿಕೆಯ ಹಿಂದಿನ ಕಾರಣವೂ ಕುತೂಹಲ
ಮೂವರು ಅಧಿಕಾರಿಗಳ ನಡುವಿನ ಎನ್ನಲಾದ ಖಾಸಗಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಿಗೆ ಹೇಗೆ ಸೋರಿಕೆಯಾಯಿತು ಎಂಬುದೂ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಆಡಿಯೋವನ್ನು ಯಾರು ರೆಕಾರ್ಡ್ ಮಾಡಿದರು, ಅದು ಹೇಗೆ ವೈರಲ್ ಆಯಿತು ಹಾಗೂ ಇದರ ಹಿಂದೆ ಯಾವುದಾದರೂ ಉದ್ದೇಶವಿತ್ತೇ ಎಂಬ ಬಗ್ಗೆಯೂ ಪೊಲೀಸ್ ಇಲಾಖೆಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಮೂವರು ಪಿಎಸ್ಸೆಗಳ ಅಮಾನತು ಕ್ರಮದಿಂದಾಗಿ ಹಳಿಯಾಳ ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಪೊಲೀಸ್ ವಲಯದಲ್ಲಿಯೂ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ.
