ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಚಂಡಮಾರುತ ಹಾಗೂ ಭಾರಿ ಗಾಳಿ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಮತ್ತು ನದಿಗಳಲ್ಲಿನ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆಗಳಿಗೆ ಮತ್ತೆ ಅನುಮತಿ ನೀಡಲಾಗಿದೆ.

ರಿವರ್ ರಾಫ್ಟಿಂಗ್ ಮತ್ತು ಜಲಸಾಹಸ ಕ್ರೀಡೆ ನಿರ್ವಹಣೆ ಹಾಗೂ ಮೇಲುಸ್ತುವಾರಿ ಸಮಿತಿ (ರಿ), ಉತ್ತರ ಕನ್ನಡ ಜಿಲ್ಲೆ, ಕಾರವಾರ ಈ ಕುರಿತು ತಿಳುವಳಿಕೆ ಪತ್ರ ಹೊರಡಿಸಿದೆ.

ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮೇನ್ ಬೀಚ್, ಓಂ ಬೀಚ್, ಕೂಡ್ಲೆ ಬೀಚ್, ಹಾಫ್‌ಮೂನ್ ಬೀಚ್ ಹಾಗೂ ಪ್ಯಾರಡೈಸ್ ಬೀಚ್, ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್ ಮತ್ತು ಕಾರವಾರ ಬೀಚ್‌ಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆಗಳಿಗೆ ಟೆಂಡರ್ ಮೂಲಕ ಕಾರ್ಯಾದೇಶ ನೀಡಲಾಗಿದೆ. ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಸಲು ಸಹ ಅನುಮತಿ ನೀಡಲಾಗಿತ್ತು.

ಇದೇ ವೇಳೆ ಕುಮಟಾ ತಾಲೂಕಿನ ತದಡಿ ಅಘನಾಶಿನಿ ನದಿ ತೀರ, ಹೊನ್ನಾವರ ಹಾಗೂ ಕಾಸರಕೋಡು ಭಾಗದ ಶರಾವತಿ ಹಿನ್ನೀರಿನಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ನಡೆಸಲು ಹಾಗೂ ಅಪ್ಸರಕೊಂಡ ಬೀಚ್‌ನಲ್ಲಿ ಪ್ರೀ-ವೆಡ್ಡಿಂಗ್ ಸೆಟ್ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿತ್ತು.

ಭಾರತ ಸರ್ಕಾರದ ಹವಾಮಾನ ಇಲಾಖೆ ಚಂಡಮಾರುತ ಹಾಗೂ ಭಾರಿ ಗಾಳಿ ಬೀಸುವ ಬಗ್ಗೆ ಮುನ್ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಎಲ್ಲಾ ಚಟುವಟಿಕೆಗಳನ್ನು ಮಂಗಳವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು.

ಆದರೆ ಮಂಗಳವಾರ ಸಂಜೆಯಿಂದ ಕಡಲತೀರ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದನ್ನು ಪರಿಗಣಿಸಿ, ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮೇಲ್ಕಂಡ ಎಲ್ಲಾ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ನಡೆಸಬಹುದಾಗಿದೆ ಎಂದು ಸಮಿತಿ ತಿಳಿಸಿದೆ.

 

Please Share: