ಕರಾವಳಿ ವಾಯ್ಸ್ ನ್ಯೂಸ್

ಉತ್ತರ ಕನ್ನಡ: ಕಾರವಾರದಿಂದ ಅಂಕೋಲಾ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಮಂಗಳವಾರ ಸಂಜೆ ನಡೆದಿದೆ.

Banner Ad

ಅಂಕೋಲಾ ಮೂಲದ ನಿಶಿಕಾ ಕಾನಡೆ ಎಂಬ ಯುವತಿ ಈ ದೌರ್ಜನ್ಯಕ್ಕೆ ಒಳಗಾಗಿದ್ದು, ಅಮರ ಗುನಗಾ (28) ಎಂಬ ಯುವಕನ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೇ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಹವಾಗುತ್ತಿದೆ.

ಘಟನೆಯ ವಿವರಗಳ ಪ್ರಕಾರ, ನಿಶಿಕಾ ಅವರು ತಮ್ಮ ತಮ್ಮನೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಕಿಟಕಿ ಬದಿಯ ಸೀಟಿನಲ್ಲಿ ತಮ್ಮ ಕುಳಿತಿದ್ದರೆ, ನಿಶಿಕಾ ಮಧ್ಯದ ಸೀಟಿನಲ್ಲಿ ಕುಳಿತಿದ್ದರು. ಈ ವೇಳೆ ಪಕ್ಕದ ಖಾಲಿ ಸೀಟಿನಲ್ಲಿ ಬಂದು ಕುಳಿತ ಯುವಕ, ಯುವತಿ ನಿದ್ರಿಸುತ್ತಿದ್ದಾಗ ಅಸಭ್ಯವಾಗಿ ವರ್ತಿಸಿದ್ದಾನೆ. ನಿದ್ರೆಯಲ್ಲಿದ್ದ ಯುವತಿಯ ಎದೆಯ ಮೇಲೆ ಕೈ ಇಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನಿದ್ರೆಯಿಂದ ಎಚ್ಚರಗೊಂಡ ನಿಶಿಕಾ, ಆರೋಪಿಯ ಕೈ ತನ್ನ ಎದೆಯ ಮೇಲಿರುವುದನ್ನು ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಆದರೆ, ಆತಂಕಕ್ಕೆ ಒಳಗಾಗದೇ ಧೈರ್ಯ ಪ್ರದರ್ಶಿಸಿದ ಅವರು, ಕೂಡಲೇ ಆರೋಪಿಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಅಷ್ಟೇ ಅಲ್ಲದೆ, ಆರೋಪಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಯುವತಿ, ಬಸ್ ನಿಲುಗಡೆಗೆ ಬಂದಾಗ ಆತನಿಗೆ ಎರಡು ಏಟುಗಳನ್ನು ನೀಡಿ ತಕ್ಕ ಪಾಠ ಕಲಿಸಿದ್ದಾರೆ. “ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕು” ಎಂಬ ಸಂದೇಶವನ್ನು ಮಹಿಳೆಯರಿಗೆ ನೀಡಿದ್ದಾರೆ. ಈ ವಿಡಿಯೋ ಆರೋಪಿಯ ಕುಟುಂಬ ಹಾಗೂ ಸಾರ್ವಜನಿಕರಿಗೆ ತಲುಪಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್., ಕೂಡಲೇ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅಂಕೋಲಾ ಪೊಲೀಸರಿಗೆ ಸೂಚಿಸಿದ್ದಾರೆ.

ಸದ್ಯ ಪೊಲೀಸರು ಸಂತ್ರಸ್ತ ಯುವತಿ ಹಾಗೂ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

 

 

Please Share: