ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ ಏ.6: ತಾಲೂಕಿನ ಅಗ್ರಗೋಣ ಬೈಲಕೇರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಂಗೀತ ಕುರ್ಚಿ ಆಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಏಕಾಏಕಿ ಕುಸಿದು ಮೃತಪಟ್ಟ ದುರ್ಘಟನೆ ರವಿವಾರ ನಡೆದಿದೆ.

Banner Ad

ಮೃತರನ್ನು ಗೌರಿ ಕುಸ್ಲು ಗೌಡ (48) ಎಂದು ಗುರುತಿಸಲಾಗಿದ್ದು, ಇವರು ಬೈಲಕೇರಿ ಅಗ್ರಗೋಣ ನಿವಾಸಿಯಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದರು.

ಗ್ರಾಮದಲ್ಲಿನ ಸರ್ಕಾರಿ ಶಾಲೆಯ 75ನೇ ವರ್ಷದ ಸಂಭ್ರಮದ ಅಂಗವಾಗಿ ರವಿವಾರ ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ನಡೆದ ಸಂಗೀತ ಕುರ್ಚಿ ಆಟದಲ್ಲಿ ಪಾಲ್ಗೊಂಡಿದ್ದಾಗ ಸಂಜೆ ಸುಮಾರು 4 ಗಂಟೆ ವೇಳೆಗೆ ಅವರು ಅಚಾನಕ್ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಸ್ಥಳದಲ್ಲಿದ್ದ ಗ್ರಾಮಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಸಂಜೆ 4.40ಕ್ಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಮೃತರ ಪುತ್ರ ಪ್ರಮೋದ ನೀಡಿದ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 2023ರ ಕಲಂ 194 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.

 

Please Share: