ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಉಪಳೇಶ್ವರದಲ್ಲಿ ಕೋಟ್ಯಂತರ ಮೌಲ್ಯದ ವನ್ಯಜೀವಿ ಉತ್ಪನ್ನಗಳು ಪತ್ತೆಯಾದ ಪ್ರಕರಣ ಅರಣ್ಯ ಇಲಾಖೆಯೊಳಗಿನ ಅಧಿಕಾರಿಗಳ ಪಾತ್ರದ ಬಗ್ಗೆಯೇ ಅನುಮಾನ ಮೂಡಿಸಿದ್ದು, ಯಲ್ಲಾಪುರ–ಇಡಗುಂದಿ ವಲಯದ ಅಧಿಕಾರಿಗಳನ್ನು ಅಮಾನತುಗೊಳಿಸಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ಮಾದೇವ ನಾಯ್ಕ ಆಗ್ರಹಿಸಿದರು.

Banner Ad

ಸೋಮೇಶ್ವರ್ ನಾಯ್ಕ

ಶುಕ್ರವಾರ ಯಲ್ಲಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್‌ನಲ್ಲಿ ಉಪಳೇಶ್ವರದಲ್ಲಿ ಅರಣ್ಯ ಸಂಚಾರಿ ಜಾಗೃತ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 15.748 ಕೆ.ಜಿ. ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಕಾಡೆಮ್ಮೆ ಕೊಂಬುಗಳು, ಎರಡು ಹುಲಿ ಉಗುರುಗಳು, ಎರಡು ಹುಲಿ ಹಲ್ಲುಗಳು, 12 ಚಿರತೆ ಉಗುರುಗಳು, ಮೂರು ಚಿರತೆ ಹಲ್ಲುಗಳು ಹಾಗೂ ಆರು ಕಾಡುಹಂದಿ ಹಲ್ಲುಗಳು ಪತ್ತೆಯಾಗಿವೆ. ಸಾಗಾಟಕ್ಕೆ ಬಳಸಿದ್ದ ಬೈಕ್ ಮತ್ತು ಸ್ಕೂಟರ್ ಜಪ್ತಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. ಅಧಿಕಾರಿಗಳ ಈ ಕಾರ್ಯಾಚರಣೆ ಅಭಿನಂದನೀಯ ಎಂದರು.

ಇಷ್ಟೊಂದು ವನ್ಯಜೀವಿ ಉತ್ಪನ್ನಗಳು ಎಲ್ಲಿಂದ ಬಂದವು?

ಇಷ್ಟೊಂದು ಪ್ರಮಾಣದ ವನ್ಯಜೀವಿ ಉತ್ಪನ್ನಗಳು ಒಂದೆರಡು ದಿನಗಳಲ್ಲಿ ಸಂಗ್ರಹವಾಗಲು ಸಾಧ್ಯವೇ ಇಲ್ಲ. ಹುಲಿ, ಕಾಡೆಮ್ಮೆ, ಚಿರತೆ ಹಾಗೂ ಪ್ಯಾಂಗೋಲಿನ್‌ಗಳು ಎಲ್ಲಿ ಸತ್ತವು? ಅವುಗಳ ಚಿಪ್ಪು, ಕೊಂಬು, ಉಗುರು ಮತ್ತು ಹಲ್ಲುಗಳು ಯಾರ ಮೂಲಕ ಸಂಗ್ರಹವಾದವು? ಹೊರರಾಜ್ಯ ಅಥವಾ ಹೊರದೇಶದಿಂದ ಬಂದಿದ್ದರೆ ಅದರ ಮೂಲ ಯಾವುದು? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕು ಎಂದು ಒತ್ತಾಯಿಸಿದರು.

ಯಲ್ಲಾಪುರ ಮತ್ತು ಇಡಗುಂದಿ ಅರಣ್ಯ ವಲಯ ವ್ಯಾಪ್ತಿಯಲ್ಲೇ ವನ್ಯಜೀವಿಗಳು ಬಲಿಯಾಗಿವೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಈ ಅಕ್ರಮ ಸಂಗ್ರಹ ಮತ್ತು ಸಾಗಾಟದ ಹಿಂದೆ ಅರಣ್ಯ ಇಲಾಖೆಯ ಕೆಳಹಂತದಿಂದ ರೇಂಜ್ ಮಟ್ಟದವರೆಗಿನ ಕೆಲವು ಅಧಿಕಾರಿಗಳ ಸಹಕಾರ ಇದೆಯೇ ಎಂಬ ಗಂಭೀರ ಅನುಮಾನ ಮೂಡಿದೆ. ಅಧಿಕಾರಿಗಳ ಕೃಪಾಕಟಾಕ್ಷವಿಲ್ಲದೆ ಇಂತಹ ಬೃಹತ್ ಪ್ರಮಾಣದ ಅಕ್ರಮ ವನ್ಯಜೀವಿ ಉತ್ಪನ್ನಗಳ ಸಂಗ್ರಹ ಸಾಧ್ಯವೇ ಎಂಬುದನ್ನು ತನಿಖೆ ಬಹಿರಂಗಪಡಿಸಬೇಕು ಎಂದರು.

ಅಧಿಕಾರಿಗಳ ಪಾತ್ರವೂ ತನಿಖೆಯಾಗಲಿ

ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಮಾತ್ರ ತನಿಖೆ ಸೀಮಿತವಾಗಬಾರದು. ವನ್ಯಜೀವಿಗಳ ಬೇಟೆ, ಹತ್ಯೆ, ಉತ್ಪನ್ನಗಳ ಸಂಗ್ರಹ ಮತ್ತು ಸಾಗಾಟದ ಹಿಂದಿರುವ ಸಂಪೂರ್ಣ ಜಾಲವನ್ನು ಬಯಲಿಗೆಳೆಯಬೇಕು. ಯಲ್ಲಾಪುರ ಮತ್ತು ಇಡಗುಂದಿ ವಲಯದ ಅಧಿಕಾರಿಗಳನ್ನು ಅಮಾನತುಗೊಳಿಸಿ, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಚಿವರನ್ನು ಆಗ್ರಹಿಸಿದರು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ ವನ್ಯಜೀವಿ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರವೀಂದ್ರನಗರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ನಾಯ್ಕ, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಗಡೆ, ಬಿಜೆಪಿ ರವೀಂದ್ರನಗರ ಬೂತ್ ಅಧ್ಯಕ್ಷ ಗಿರೀಶ್ ಬೋವಿ ಹಾಗೂ ಬೂತ್ ಕಾರ್ಯದರ್ಶಿ ಕಾರ್ತಿಕ್ ನಾಯ್ಕ ಉಪಸ್ಥಿತರಿದ್ದರು.

 

 

 

 

 

 

Please Share: