ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಉತ್ತರ ಕನ್ನಡದ ಫುಟ್ಬಾಲ್ ಅಂಗಳದಲ್ಲಿ ಭವಿಷ್ಯದ ತಾರೆಗಳು ಯಾರು? ಜಿಲ್ಲೆಯ 200ಕ್ಕೂ ಹೆಚ್ಚು ಯುವ ಆಟಗಾರರ ಪೈಕಿ ಯಾರ ಪ್ರತಿಭೆಗೆ ಭಾಗ್ಯದ ಬಾಗಿಲು ತೆರೆಯಲಿದೆ, ಯಾರಿಗೆ ವೃತ್ತಿಪರ ಫುಟ್ಬಾಲ್‌ನತ್ತ ಮುನ್ನಡೆಯುವ ಅವಕಾಶ ಒಲಿಯಲಿದೆ ಎಂಬ ಕುತೂಹಲ ಮೂಡಿದೆ. ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆದ ‘ಟೈಗರ್ IKF-KSFA ನಮ್ಮ ಕರ್ನಾಟಕ ಟ್ರಯಲ್ಸ್ ಸೀಸನ್-6’ ಇದಕ್ಕೆ ವೇದಿಕೆ ಕಲ್ಪಿಸಿದೆ.

Banner Ad

ಇಂಡಿಯಾ ಖೇಲೋ ಫುಟ್‌ಬಾಲ್ (IKF) ಹಾಗೂ ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ (KSFA) ಜಂಟಿಯಾಗಿ ಆಯೋಜಿಸಿರುವ ಟ್ರಯಲ್ಸ್‌ನಲ್ಲಿ 2009ರಿಂದ 2016ರ ನಡುವೆ ಜನಿಸಿದ ಬಾಲಕ-ಬಾಲಕಿಯರು ಭಾಗವಹಿಸಿದ್ದರು. ಕಾರವಾರದಲ್ಲಿ ಬೋಲ್ಡ್ ಆಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಸುಮಾರು 200 ಯುವ ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಟ್ರಯಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು IKFನ ಟ್ಯಾಲೆಂಟ್ ಸ್ಕೌಟಿಂಗ್ ಅಧಿಕಾರಿಗಳಾದ ಯದುವೀರ್ ಕೃಷ್ಣ ಹಾಗೂ ಡೇನಿಯಲ್ ಪರಿಶೀಲಿಸಿದರು. ಆಯ್ಕೆಯಾಗುವ ಆಟಗಾರರಿಗೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಫೈನಲ್ಸ್‌ನಲ್ಲಿ ಐ-ಲೀಗ್ ಹಾಗೂ ಪ್ರಮುಖ ವೃತ್ತಿಪರ ಫುಟ್ಬಾಲ್ ಕ್ಲಬ್‌ಗಳ ಮುಂದೆ ತಮ್ಮ ಪ್ರತಿಭೆ ಪ್ರದರ್ಶಿಸುವ ಅಪರೂಪದ ಅವಕಾಶ ದೊರೆಯಲಿದೆ.

ಟ್ರಯಲ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಫುಟ್ಬಾಲ್‌ನಲ್ಲಿ ದೈಹಿಕ ಸದೃಢತೆ, ಶಿಸ್ತು ಹಾಗೂ ತಂಡದ ಸಹಕಾರ ಅತ್ಯಂತ ಮುಖ್ಯ. ಸೋಲು-ಗೆಲುವಿಗಿಂತ ತಮ್ಮ ಗರಿಷ್ಠ ಸಾಮರ್ಥ್ಯವನ್ನು ಪ್ರದರ್ಶಿಸುವುದು ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ವಿ. ಪ್ರಜಿತ್ ವಹಿಸಿದ್ದರು. ಲಿಯೋ ಎಫ್. ಲೂಯಿಸ್ ಸ್ವಾಗತಿಸಿದರು. ಸ್ಯಾಮ್ಸನ್ ಜೆ. ಡಿ’ಸೋಜಾ, ಅಕ್ವಿಲ್ ಫರ್ನಾಂಡಿಸ್, ಆಂಥೋನಿ ಡಿ’ಕೋಸ್ಟಾ, ಕ್ರಿಸ್ಟೋಫರ್ ಡಿ’ಸಿಲ್ವಾ, ಅಲ್ಫೋನ್ಸೋ ಫೆರ್ನಾಂಡಿಸ್ ಹಾಗೂ ಪ್ರಕಾಶ್ ರೇವಣ್ಕರ್ ಉಪಸ್ಥಿತರಿದ್ದರು.

ಡಾ. ಲಿಯಾಂಡರ್ ಎ.ಆರ್. ಲೂಯಿಸ್ ನೇತೃತ್ವದ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ಹಾಗೂ ಆಂಬ್ಯುಲೆನ್ಸ್ ಸೇವೆ ಒದಗಿಸಿತು.

Please Share: