ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಾರವಾರಕ್ಕೆ ಭೇಟಿ ನೀಡಿದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಬಸವಂತಪ್ಪ ಅವರು ಇಂಜಿನಿಯರ್ಸ್ ಡೇ ಅಂಗವಾಗಿ ಇಲ್ಲಿನ ಲೋಕೋಪಯೋಗಿ ಇಲಾಖೆ ಕಚೇರಿ ಎದುರಿನ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಲೋಕೋಪಯೋಗಿ ಇಲಾಖೆಯ ವಿಭಾಗ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಬಸವಂತಪ್ಪ ಹಾಗೂ ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್ ಅವರನ್ನು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಬಸವಂತಪ್ಪ, ಸರ್.ಎಂ. ವಿಶ್ವೇಶ್ವರಯ್ಯ ಅವರ ಕಾರ್ಯನಿಷ್ಠೆ, ಶಿಸ್ತು ಹಾಗೂ ದೂರದೃಷ್ಟಿ ಇಂದಿನ ಇಂಜಿನಿಯರ್‌ಗಳಿಗೆ ಮಾದರಿಯಾಗಬೇಕು ಎಂದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ, ಪಾರದರ್ಶಕತೆ ಹಾಗೂ ಸಾರ್ವಜನಿಕ ಹಿತಕ್ಕೆ ಆದ್ಯತೆ ನೀಡಿ ಇಂಜಿನಿಯರ್‌ಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಇದೇ ವೇಳೆ ರಾಜ್ಯದ ಎಲ್ಲ ಇಂಜಿನಿಯರ್‌ಗಳಿಗೆ ಇಂಜಿನಿಯರ್ಸ್ ಡೇ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಶಶಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಿ.ಟಿ. ನಾಯ್ಕ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ, ತಾಂತ್ರಿಕ ಸಹಾಯಕ ಎಂ.ಎನ್. ನಾಯ್ಕ, ಲೆಕ್ಕ ಅಧೀಕ್ಷಕ ರಾಜೇಶ್ ರಾಮನಾಥನ್ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


