ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಗೋಕರ್ಣದ ತದಡಿ ಮೀನುಗಾರಿಕಾ ಬಂದರಿನ ದುರಂತ ಮಾಸುವ ಮುನ್ನವೇ ತಾಲೂಕಿನ ಮುದ್ಗಾ ಬಂದರಿನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಬೋಟ್‌ನಲ್ಲಿ ಉಸಿರುಗಟ್ಟಿ ಇಬ್ಬರು ಯುವ ಮೀನುಗಾರ ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Banner Ad

ಒಡಿಶಾ ಮೂಲದ ಪುರಂದರ ಬಿಸರಾ (21) ಹಾಗೂ ಆಕಾಶ ನಾಯ್ಕ (24) ಮೃತಪಟ್ಟವರು. ಲಾಲಿಂದರ ಧ್ರುವ (41) ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನೂ ಬೆಲೇಕೇರಿಯ ಸಚಿನ್ ಕೃಷ್ಣ ಖಾರ್ವಿ ಅವರು ಕಾರವಾರದ ಕ್ರಿಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಶನಿವಾರ ರಂದು ಬೆಳಿಗ್ಗೆ 6.30ರ ಸುಮಾರಿಗೆ ಮುದ್ಗ ಮೀನುಗಾರಿಕಾ ಬಂದರಿನಲ್ಲಿ ಪರ್ಷಿಯನ್ ಮೀನುಗಾರಿಕಾ ಬೋಟ್ (KA-02-MM-6301)ನ ಸ್ಟೋರೇಜ್ ವಿಭಾಗದಿಂದ ಮೀನು ಖಾಲಿ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಟೋರೇಜ್‌ನಲ್ಲಿ ಹೆಚ್ಚಿನ ಪ್ರಮಾಣದ ಚಮನ್ ಮೀನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಮೀನು ಖಾಲಿ ಮಾಡುವ ವೇಳೆ ಉಸಿರುಗಟ್ಟಿ ಮೂವರು ಅಸ್ವಸ್ಥರಾಗಿದ್ದಾರೆ.

ಈ ಬೋಟ್ ಪಾಯಲ್ ಎಂಬುವವರ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಗೋಕರ್ಣದ ತದಡಿ ಬಂದರಿನಲ್ಲಿ ಇದೇ ಮಾದರಿಯ ಅವಘಡ ಸಂಭವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದರೆ, ಮತ್ತೊಬ್ಬ ಆಸ್ಪತ್ರೆಗೆ ದಾಖಲಾಗಿದ್ದ. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ.

 

 

 

 

Please Share: